ಪಿ. ಲಂಕೇಶ್ ಅವರ ಪ್ರಸಿದ್ಧ ನಾಟಕ ‘ಗುಣಮುಖ’ - ನಾದಿರ್ ಶಾ ಬದುಕಿದ್ದು 59 ವರ್ಷ. 1739ರಲ್ಲಿ ಹಿಂದೂಸ್ತಾನಕ್ಕೆ ಹೊರಟು 1740ರ ವಸಂತದಲ್ಲಿ ಮೊಗಲ್ ಸೈನ್ಯವನ್ನು ಕರ್ನೂಲ್ ನಲ್ಲಿ ಧ್ವಂಸ ಮಾಡಿದ. ಇಲ್ಲಿಗೆ ಬರುವ ಮುನ್ನವೇ ನಾದಿರ್, ದಾಳಿ, ದೊಂಬಿ, ಆಕ್ರಮಣದ ಮೂಲಕ ಟರ್ಕಿ, ರಷ್ಯಾ ದೇಶಗಳಲ್ಲಿ ಪ್ರಾಣಭಯ ಹುಟ್ಟಿಸಿ ಪರ್ಶಿಯಾ-ಇರಾನ್ ಸಾಮ್ರಾಜ್ಯ ಕಟ್ಟಿದ್ದ. ಅನಾಮಿಕ ಬುಡಕಟ್ಟೊಂದರಲ್ಲಿ ಜನಿಸಿದ ನಾದಿರ್, ಸೈನಿಕನಾಗಿ ಮುಂದೆ ಬಂದು, ಸ್ವಲ್ಪಕಾಲ ದೊರೆಯೊಬ್ಬನ ರಕ್ಷಕನಾಗಿದ್ದು ಆಮೇಲೆ ತಾನೇ ಚಕ್ರವರ್ತಿಯಾದ. ನಾದಿರ್ 1740ರಲ್ಲಿ ಭಾರತದ ಮೇಲೆ ಅಪ್ಪಳಿಸಿದಾಗ ಮೊಗಲ್ ಮನೆತನ ಶ್ರೀಮಂತವಾಗಿತ್ತು. ಹತ್ತು ಲಕ್ಷಕ್ಕಿಂತ ದೊಡ್ಡದಾಗಿದ್ದ ಸೈನ್ಯವಿತ್ತು. ಆದರೆ ಸುಖಸಂಪತ್ತಿನಿಂದಾಗಿ, ಬಾಬರ್, ಅಕ್ಬರ್ ನಲ್ಲಿದ್ದ ಕೆಚ್ಚಿನ ಅಭಾವದಿಂದಾಗಿ ದೊರೆಯೊಗಿದ್ದ ನಜಿರುದ್ದೀನ್ ಶಾ ಮೇಣದ ಬೊಂಬೆಯಂತಾಗಿದ್ದ. ಮೊಗಲ್ ವೈಭವ ಪೊಳ್ಳಾಗಿತ್ತು. ದಿವಾನರುಗಳಲ್ಲಿ ಪಿತೂರಿ, ಸಣ್ಣತನವಿತ್ತು. ಮರಾಠರು ಮೊಗಲ್ ಸಾಮ್ರಾಜ್ಯವನ್ನು ಸ್ವಲ್ಪಸ್ವಲ್ಪವಾಗಿ ಕಿತ್ತು ತಿನ್ನುತ್ತಿದ್ದರು. ಮೂಡುತ್ತಿದ್ದ ನಾದಿರ್, ಮುಳುಗುತ್ತಿದ್ದ ಮೊಗಲ್ ದೊರೆ-ಇವರ ನಡುವೆ ಯಾವುದೇ ಸಮಾನ ಅಂಶಗಳಿರಲಿಲ್ಲ. ಯುದ್ಧದ ತಂತ್ರ ಮತ್ತು ಕಾರ್ಯಾಚರಣೆಯಲ್ಲಿ ನಿಷ್ಣಾತನಾಗಿದ್ದ ನಾದಿರ್ ಯುದ್ಧ ತರುತ್ತಿದ್ದ ಸುಖ ಮತ್ತು ಸಂಪತ್ತಿಗಿಂತ ಹೆಚ್ಚಾಗಿ ಯುದ್ಧದ ಕ್ರೌರ್ಯದಿಂದ ರೋಮಾಂಚನಗೊಳ್ಳುತ್ತಿದ್ದ. ಆಡಳಿತ ಮತ್ತು ಪ್ರಜೆಗಳ ನೆಮ್ಮದಿಯ ಬಗ್ಗೆ ಎಂದೂ ಗಮನಕೊಡದಷ್ಟು ತಾಳ್ಮೆಗೆಟ್ಟ ನಾದಿರ್, ಮನುಷ್ಯನ ಸೋಗಲಾಡಿತನ, ಸುಳ್ಳು ಮತ್ತು ಮೋಸ ಕಂಡು ಬೆಂಕಿಯಾಗುತ್ತಿದ್ದ. ಮೊಗಲ್ ಆಸ್ಥಾನ ಅವನ ಅನುಮಾನ, ರೊಚ್ಚು ಕೆರಳಿಸುತ್ತಿತ್ತು. ಎಂದೂ ಒಂದು ಕಡೆ ನಿಲ್ಲದಿದ್ದ ನಾದಿರ್ ಹಿಂದೂಸ್ತಾನದ ಸಂಪತ್ತು ಮತ್ತು ಅರಾಜಕತೆ ಕಂಡು ಕ್ಷಣ ಇಲ್ಲಿ ಇದ್ದುಬಿಡಲು ಯೋಚಿಸಿದ, ಪರ್ಶಿಯಾಕ್ಕೆ ಹಿಂದಿರುಗುವ ಆಸೆ ಮತ್ತು ಇಲ್ಲಿ ತಂಗುವ ಚಪಲ, ತನ್ನ ವೀರ್ಯವತ್ತಾದ ಪ್ರಖರತೆ ಮತ್ತು ಇಲ್ಲಿಯ ನಿರ್ವೀರ್ಯ ಕುತಂತ್ರ ಕಂಡು ತನ್ನ ಖಡ್ಗದ ಮೂಲಕ ಅಸ್ತಿತ್ವ ಕಂಡುಕೊಳ್ಳುವಾಗ ದೈಹಿಕವಾಗಿ, ಮಾನಸಿಕವಾಗಿ ಅಸ್ವಸ್ಥನಾದ. ಈ ನಾಟಕದಲ್ಲಿ ಬರುವ ಹಕೀಮ ನಾದಿರ್ ನನ್ನು ಆಕಸ್ಮಿಕವಾಗಿ ಆತನ ಆಳದ ನರಕದಿಂದ ಹೊರತಂದ. ಆದರೆ ನಾದಿರ್ ಆರಿಸಿಕೊಂಡಿದ್ದು ಕಷ್ಟದ, ಒಬ್ಬಂಟಿ ದಾರಿ. ಹಿಂದೂಸ್ತಾನದಿಂದ ಹಿಂತಿರುಗಿದ ಮೇಲೆ ನಾದಿರ್ ತನ್ನ ಸಾಮ್ರಾಜ್ಯವನ್ನು ಮತ್ತಷ್ಟು ವಿಸ್ತರಿಸಿದ. ಹಾಗೆಯೇ ಇನ್ನಷ್ಟು ರೋಗಗ್ರಸ್ತನಾದ. ಅವನ ಸೈನ್ಯಕ್ಕೆ ಸುಸ್ತಾಗಿತ್ತು. ಒಂದಾದ ಮೇಲೊಂದರಂತೆ ಯುದ್ಧ ಮಾಡುತ್ತಲೇ ಇದ್ದ ಆತನ ಯೋಧರು ರಕ್ತಪಾತ ಮತ್ತು ನಾದಿರ್ ನಡವಳಿಕೆಯಿಂದ ದಿಗ್ಭ್ರಾಂತರಾಗಿದ್ದರು. 1741ರಲ್ಲಿ ಅವರು ಗೊಂದಲಮಯ ನಾದಿರ್ ವಿರುದ್ಧ ದಂಗೆಯೆದ್ದು ಅವನನ್ನು ಕೊಲ್ಲಲು ಯತ್ನಿಸಿದರು. ಇಲ್ಲಿ ಕೂಡಾ ನಾದಿರ್ ಆಕಸ್ಮಿಕವಾಗಿ ಉಳಿದ. ಈ ದಂಗೆಗೆ ತನ್ನ ಮಗನೇ ಕಾರಣ ಎಂದು ಸಂಶಯಗೊಂಡ ನಾದಿರ್, ಅವರ ಕಣ್ಣು ಕೀಳಿಸಿದ. 1747ರ ಹೊತ್ತಿಗೆ ನಾದಿರ್ ವಿರುದ್ಧ ನೈಸರ್ಗಿಕ, ಮನುಷ್ಯ ಶಕ್ತಿಗಳು ಒಗ್ಗಟ್ಟಾಗಿ ನಿಂತಿದ್ದವು. ನಾದಿರ್ ನ ಸೈನಿಕರೇ ಅವನನ್ನು ಕೊಂದು ಹಾಕಿದರು. ನಾದಿರ್ ನ ಈ ವಿಚಿತ್ರ ದಿಗ್ವಿಜಯದ, ಸೋಲಿನ ಜೀವನದಲ್ಲಿ ನನ್ನ ಮನಸ್ಸು ಸೆಳೆದದ್ದು ಆತನ ಅನುಮಾನ, ನಿಷ್ಠುರತೆ ಮತ್ತು ಕಾಯಿಲೆ ಎನ್ನುತ್ತಾರೆ ಪಿ.ಲಂಕೇಶ್. ಘಟನಾವಳಿಗಳು ಮತ್ತು ಮನುಷ್ಯರ ದ್ವಂದ್ವಗಳು ನಾದಿರ್ ನನ್ನು ರಸಾತಳಕ್ಕೆ ತಳ್ಳಿದರೂ ಆತ ಎದ್ದು ಬರುವ ರೀತಿ, ಸತ್ಯ ಮತ್ತು ಸುಳ್ಳು ಒಬ್ಬ ಸ್ವಪ್ರತಿಷ್ಠೆಯನ್ನು ಸ್ವರ್ಶಿಸುವ ಬಗೆ ಕಾಡಿದ್ದರಿಂದ ಲಂಕೇಶ್ ಇಂತಹ ಮಹತ್ವದ ಕೃತಿ ರಚಿಸಿದ್ದಾರೆ.
©2024 Book Brahma Private Limited.