ಚಂದ್ರಶೇಖರ ಕಂಬಾರರ ’ಅಂಗೀಮ್ಯಾಲಂಗಿ’ ಏಕಾಂಕ ಮತ್ತು ’ಹರಕೆಯ ಕುರಿ’ ನಾಟಕಗಳನ್ನು ಈ ಪುಸ್ತಕ ಒಳಗೊಂಡಿದೆ.
ಅಂಗೀ ಮ್ಯಾಲಂಗಿ ನಾಟಕದಲ್ಲಿ ಸಾಂಪ್ರದಾಯಕ ಜೀವನ ನಡೆಸುವವ ಇದ್ದಕ್ಕಿದ್ದಂತೆ ಆಧುನಿಕ ನಾಗರೀಕತೆಯ ಸೋಗು ಹಾಕಿದಾಗ ಉಂಟಾಗುವ ತಲ್ಲಣಗಳು, ಅನಿಶ್ಚಿತತೆಗಳನ್ನು ನಾಟಕ ಚಿತ್ರಿಸುತ್ತದೆ.
ನರಸಣ್ಣ ಎಂಬ ವಿದ್ಯಾವಂತನು ಶಾಂತಾ ಎಂಬ ಕಪ್ಪು ಸುಂದರಿಯ ಮದುವೆ ಆಗಿದ್ದಾನೆ. ಆದರೆ, ಅವನು ಅವಳು ತನಗೆ ತಕ್ಕವಳಲ್ಲ ಎಂಬ ಕೀಳರಿಮೆ. ಅದಕ್ಕೆ ಪರಿಹಾರವಾಗಿ ಮತ್ತೊಬ್ಬಳನ್ನು ಮದುವೆಯಾಗಲು ಬಯಸುತ್ತಾನೆ. ನರಸಣ್ಣನ ಸ್ನೇಹಿತನ ಹೆಸರು ಬುದ್ದಣ್ಣ. ನರಸಣ್ಣನ ಆಧುನಿಕತೆಯ ಬುದ್ದಿಗೆ ಪಾಠ ಕಲಿಸಲು ನಿರ್ಧರಿಸುತ್ತಾನೆ. ತವರು ಮನೆಯಲ್ಲಿರುವ ಶಾಂತಳನ್ನು ಕರೆಸಿ ತಮ್ಮ ಆಳಿನಂತೆ ನಟಿಸುವಂತೆ ಹೇಳುತ್ತಾನೆ. ಕನ್ಯೆ ಕೊಡಲು ಬರುವ ಹೆಣ್ಣಿನ ತಂದೆ - ತಾಯಿಗಳ ಆತಿಥ್ಯ ಮಾಡುತ್ತ, ಒಯ್ಯಾರದಲ್ಲಿ ಓಡಾಡುವಳನ್ನು ನರಸಣ್ಣ ಮೆಚ್ಚುತ್ತಾನೆ. ತಾನೂ ಅವಳ ಆತಿಥ್ಯ ಸ್ವೀಕರಿಸಿ ಅವಳಿಗೆ ಟಿಪ್ಸ್ ಕೊಡಲು ನಿರ್ಧರಿಸಿದಾಗ ಅವಳು ತಾನು ಕೈಹಿಡಿದ ಶಾಂತಾ ಎಂಬುದು ಬೆಳಕಿಗೆ ಬರುತ್ತದೆ. ನರಸಣ್ಣನಿಗೆ ತನ್ನ ತಪ್ಪಿನ ಅರಿವಾಗಿ ಶಾಂತಾಳೊಂದಿಗೆ ಜೀವಿಸಲು ನಿರ್ಧರಿಸುತ್ತಾನೆ.
ಹರಕೆಯ ಕುರಿ'
ಕಂಬಾರರ 'ಹರಕೆಯ ಕುರಿ' ನಾಟಕವು ರಾಜಕೀಯ ವಸ್ತು ಹೊಂದಿರುವಂತಹದು. ಸ್ವಾತಂತ್ರೋತ್ತರ ಭಾರತದ ರಾಜಕೀಯದಿಂದ ಮಧ್ಯಮ ವರ್ಗದ ಜನತೆ ಸುಲಭವಾಗಿ ಪಾರಾಗುವಂತಿಲ್ಲ ಎನ್ನುವ ವಾಸ್ತವ ಚಿತ್ರಣ ನೀಡುವ ನಾಟಕ. ರಾಜಕೀಯದ ಸಹವಾಸವೇ ಬೇಡ ಎನ್ನುವವರಿಗೆ, ಅವರಿಗೆ ತಿಳಿಯದಂತೆ ಅವರನ್ನು ಆಕ್ರಮಿಸುವ ಮೂಲಕ ರಾಜಕೀಯದ ಸ್ವರೂಪವನ್ನು ನಾಟಕ ತೋರಿಸುತ್ತದೆ.
ಬೆಂಗಳೂರು ನಗರದಲ್ಲಿ ನೌಕರಿ ಮಾಡುತ್ತಿರುವ ಮಧ್ಯಮ ವರ್ಗದ ತರುಣ ದಂಪತಿಗಳು. ಕವಿ ಹೃದಯದ ಪ್ರಕಾಶ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕ. ಸರೋಜ ವಿಧಾನಸೌಧದಲ್ಲಿ ಗುಮಾಸ್ತೆ. ದಂಪತಿಗಳು ಸಂಜೆ ಹೊತ್ತು ಮನೆಯಲ್ಲಿ ಕವಿತೆಯ ನಾಯಕಿಯ ಕುರಿತು ಚರ್ಚೆ ನಡೆಸುತ್ತಾರೆ. ಹೊರಗಡೆ ಚುನಾವಣೆ ಘೋಷಣೆಗಳು ಕೇಳಿ ಬರುತ್ತವೆ.
ಪ್ರಕಾಶ ಮತ್ತು ಸರೋಜ ಈ ನಾಟಕದ ಮುಖ್ಯ ಪಾತ್ರಗಳಲ್ಲ. ಆದರೆ ನಾಟಕ ಆರಂಭಗೊಳ್ಳುವುದು ಇವರ ಮನೆಯಲ್ಲಿ. ವಿರೋಧ ಪಕ್ಷದ ಮುಖಂಡನಾಗಿರುವ ರುದ್ರಪ್ಪನ ಕೈಗೊಂಬೆಯಾಗಿ ಸಿದ್ದಲಿಂಗು ಎಂಬ ಯುವಕ, ಅದೇ ಪಕ್ಷದ ಜನಪ್ರಿಯ ನೇತಾರ ಶ್ರೀಕಾಂತಜಿಯನ್ನು ಕೊಲೆ ಮಾಡಿ ದಂಪತಿಗಳ ಮನೆಯಲ್ಲಿ ಆಶ್ರಯ ಪಡೆಯುತ್ತಾನೆ. ತಮ್ಮ ಅನುಪಸ್ಥಿತಿಯಲ್ಲಿ ತಮ್ಮ ಮನಯೇ ರುದ್ರಪ್ಪನ ಖಾಸಗಿ ಆಫೀಸಾಗಿರುವುದನ್ನು ದಂಪತಿಗಳು ತಿಳಿಯದೇ ಅವನ ರಾಜಕೀಯ ಚದುರಂಗದಾಟದಲ್ಲಿ ಸಿಲುಕಿ ಪರಸ್ಪರ ಮನಸ್ತಾಪಕ್ಕೊಳಗಾಗುತ್ತಾರೆ. ಅಜಾತ ಸ್ಥಳದಿಂದ ದಂಪತಿಗಳ ಮನೆಗೆ ಫೋನಾಯಿಸುವ ಸಿದ್ದಲಿಂಗು, ಅವರ ಮನೆಗೆ ಬಂದು ರುದ್ರಪ್ಪನು ಹೆಣೆದಿರುವ ರಾಜಕೀಯ ಕುತಂತ್ರಗಳನ್ನೆಲ್ಲ ಬಯಲು ಮಾಡುತ್ತಾನೆ. ತಾನೂ ಕೂಡ ರುದ್ರಪ್ಪನ ಕೈಗೊಂಬೆ ಎಂದು ಒಪ್ಪಿಕೊಂಡು ಶ್ರೀಕಾಂತಜಿಯನ್ನು ಕೊಲೆ ಮಾಡಿರುವುದಕ್ಕೆ ಸಮರ್ಥನೆ ನೀಡುತ್ತಾನೆ. ರುದ್ರಪ್ಪನಿಗೆ ಶ್ರೀಕಾಂತಜಿ ಶತ್ರುವಾದರೆ ನನಗೆ ಅವರಿಬ್ಬರೂ ಶತ್ರುಗಳೆಂದು ಹೇಳುತ್ತಾನೆ. ತನ್ನೆಲ್ಲ ಪೂರ್ವಾಪರವನ್ನೆಲ್ಲ ಬಿಡಿಸಿಡುವ ಸಿದ್ದಲಿಂಗು ದಂಪತಿಗಳು ಅಭಿಮಾನ ಪಡುವಂತೆ ಮಾತನಾಡುತ್ತಾನೆ. ಅಲ್ಲದೆ ನೀವಿಬ್ಬರೂ ನನ್ನ ವಿಚಾರಗಳನ್ನು ಮುಂದೆ ನಡೆಯಿಸಿಕೊಂಡು ಹೋಗುವ, ನನ್ನ ವಾರಸುದಾರರು ಎಂದು ಹೇಳುತ್ತಿರುವಾಗಲೇ ರುದ್ರಪ್ಪನ ಬಂಟರಿಂದ ಕೊಲೆಯಾಗುತ್ತಾನೆ.
©2024 Book Brahma Private Limited.