`ಮಾಲತೀಮಾಧವ' ನಾಟಕದ ಕಥೆಯನ್ನು ಒಂದೇ ಸಾಲಿನಲ್ಲಿ ಹೇಳಬಹುದು. ಮಾಲತಿ ಮತ್ತು ಮಾಧವ ಎಂಬ ಇಬ್ಬರು ಪ್ರೇಮಿಗಳು ತಮ್ಮ ಸಮಾಗಮಕ್ಕಿರುವ ಹಲವು ತೊಡಕುಗಳನ್ನು ದಾಟಿ ಕಡೆಗೂ ಮದುವೆಯಾಗುತ್ತಾರೆ -- ಇಷ್ಟೇ! ಜತೆಗೆ ಇನ್ನೂ ಎರಡು ಜೋಡಿಗಳೂ ಈ ನಾಟಕದ ತುದಿಗೆ ಒಂದಾಗುತ್ತವೆ. ಮಾಧವನ ಗೆಳೆಯ ಮಕರಂದ ಮತ್ತು ಮಾಲತಿಯ ಗೆಳತಿ ಮದಯಂತಿಕೆಯರದ್ದು ಒಂದು ಜೋಡಿ; ಮಾಧವನ ಸೇವಕ ಕಲಹಂಸ ಮತ್ತು ಬೌದ್ಧವಿಹಾರದ ದಾಸಿ ಮಂದಾರಿಕೆಯದ್ದು ಇನ್ನೊಂದು ಜೋಡಿ. ಮಾಲತೀಮಾಧವರ ವಿವಾಹಕ್ಕೆ ವಿಘ್ನ ಸೃಷ್ಟಿಸಲಿಕ್ಕೆ ನಾಟಕವು ರಾಜಕಾರಣದ ಒಂದು ಎಳೆಯನ್ನು ತರುತ್ತದೆ . ಪದ್ಮಾವತಿ ನಗರದ ರಾಜನು ಮಂತ್ರಿಯಾಗಿರುವ ಮಾಲತಿಯ ತಂದೆಗೆ ಆಕೆಯನ್ನು ತನ್ನ ಗೆಳೆಯ ನಂದನನಿಗೇ ಮದುವೆ ಮಾಡಿಕೊಡು ಎಂದು ಆಜ್ಞೆ ಮಾಡುತ್ತಾನೆ. ಇದರಿಂದ ಹತಾಶನಾದ ಮಾಧವನು ನಾಗರಿಕ ಜಗತ್ತನ್ನೇ ತೊರೆದು ಸ್ಮಶಾನವಾಸಿಯಾಗುವುದು, ಅಲ್ಲಿ ಕಾಪಾಲಿಕರಿಂದ ನರಬಲಿಗಾಗಿ ಮಾಲತಿಯ ಅಪಹರಣವಾಗುತ್ತಿರುವುದನ್ನು ಕಂಡು ಆಕೆಯನ್ನು ಕಾಪಾಡುವುದು, ಆಮೇಲೆ ಮತ್ತೆ ಮಾಲತಿಯ ಅಪಹರಣವಾಗುವುದು, ಮತ್ತೊಮ್ಮೆ ಮಾಧವನು ವಿರಹದಿಂದ ಕಾಡುಮೇಡು ಅಲೆಯುವುದು ಮತ್ತು ಅಂತಿಮವಾಗಿ ಸೌದಾಮಿನಿಯೆಂಬ ತಂತ್ರಸಾಧಕಿಯ ನೆರವಿನಿಂದ ಎಲ್ಲರ ಸಮಾಗಮ ನಡೆಯುವುದು -- ಇದು ಈ ಕಥನವು ಸಾಗುವ ದಾರಿ. ಇಂಥ ಅಸಂಭವನೀಯ ಸಂವಿಧಾನವನ್ನು ಹೆಣೆಯಲಿಕ್ಕೆ ಈ ನಾಟಕವು ಕಾಮಂದಕಿಯೆಂಬ ಬೌದ್ಧ ಸನ್ಯಾಸಿನಿಯನ್ನೂ ಅವಳ ಶಿಷ್ಯಂದಿರನ್ನೂ ಬಳಸಿಕೊಳ್ಳುತ್ತದೆ. ಸಂಸಾರವನ್ನು ತೊರೆದು ವೈರಾಗ್ಯದತ್ತ ಮುಖಮಾಡಿರುವ ಅವರೇ, ಇಲ್ಲಿ ಸಂಬಂಧಗಳನ್ನು ಕಟ್ಟುವ ಸೂತ್ರಧಾರರಾಗುತ್ತಾರೆ . ಆಗಬಾರದ ಮದುವೆಗಳನ್ನು ನಾನಾ ಬಗೆಯ ನಾಟಕೀಯ ಉಪಾಯಗಳಿಂದ ತಪ್ಪಿಸಿ, ಆಗಬೇಕಾದ ಮದುವೆಗಳು ತಂತಾನೇ ಆಗುವಂತೆ ಮಾಡುವ ದೌತ್ಯದ ಉದ್ಯೋಗವನ್ನು ಇವರು ಕೈಗೊಳ್ಳುತ್ತ ಹೋಗುತ್ತಾರೆ.
©2024 Book Brahma Private Limited.