ಕವಿ ತಿರುಮಲೇಶರು ರಚಿಸಿದ ಮೊದಲ ನಾಟಕ 'ಟೈಬೀರಿಯಸ್'. ಇದರ ವಸ್ತು ರೋಮನ್ ಸಾಮ್ರಾಜ್ಯದ ಎರಡನೆಯ ರಾಜನಾದ ಟೈಬೀರಿಯಸ್ ಕ್ಲಾಡಿಯಸ್ ನೀರೋ (ಕ್ರಿ.ಪೂ. 42–ಕ್ರಿ.ಶ. 37). ಕೆಲವು ಶತಮಾನಗಳ ಕಾಲ ಗಣರಾಜ್ಯವಾಗಿದ್ದ ರೋಮ್ ಜೂಲಿಯಸ್ ಸೀಸರನ ಕಾಲದಲ್ಲಿ ಸಾಮ್ರಾಜ್ಯಶಾಹಿಯ ಕಡೆಗೆ ವಾಲಿತು. ಸೀಸರನ ನಂತರ ಬಂದ ಒಕ್ಟೇವಿಯಸ್ ಆಗಸ್ಟಸ್ (ಕ್ರಿ.ಪೂ. 63-ಕ್ರಿ.ಶ. 14) ರೋಮನ್ ಸಾಮ್ರಾಜ್ಯದ ನಿಜವಾದ ಸ್ಥಾಪಕ; ಇವನು ಕ್ರಿ.ಪೂ. 27ರಿಂದ ಕ್ರಿ.ಶ. 14ರತನಕ ರಾಜ್ಯಭಾರ ಮಾಡಿದ. ಆಗಸ್ಟಸ್ ಬಹಳ ಜನಪ್ರಿಯ ರಾಜನಾಗಿದ್ದ, ರೋಮನ್ನು ತಳದಿಂದ ಕಟ್ಟಿದವನೇ ಆಗಸ್ಟಸ್, I found Rome, a city of bricks and let it a city of marbles ಎನ್ನುವುದು ಅವನದೊಂದು ಪ್ರಸಿದ್ದ ಮಾತು. ಆಗಸ್ಸಸ್‌ಗೆ ಗಂಡು ಸಂತಾನ ಇರಲಿಲ್ಲ. ಆದ್ದರಿಂದ ಅವನು ತನ್ನ ಪತ್ನಿ ಲಿವಿಯಾ ಅವಳ ಮೊದಲ ಗಂಡನಿಂದ ಪಡೆದ ಟೈಬೀರಿಯಸ್‌ನ್ನ ದತ್ತು ಪುತ್ರನನ್ನಾಗಿ ಸ್ವೀಕರಿಸಿಕೊಳ್ಳುತ್ತಾನೆ. ಆಗಸ್ಟಸ್ ತನ್ನ 75ನೇ ವಯಸ್ಸಿನಲ್ಲಿ ತೀರಿಕೊಂಡ. ಅದು ನೈಸರ್ಗಿಕ ಕಾರಣಗಳಿಂದ ಇರಬಹುದು; ಆದರೂ ಅದೊಂದು ಕೊಲೆಯಾಗಿರಬಹುದು ಎಂಬ ಶಂಕೆ ಆಗಿನ ಕಾಲದ ಜನರಲ್ಲಿ ಇತ್ತು. ಸಂಶಯದ ಸೂಜಿ ಲಿವಿಯಾಳ ಕಡೆ ತಿರುಗಿತ್ತು. ಪಟ್ಟಕ್ಕೆ ಬಂದಾಗ ಟೈಬೀರಿಯಸ್‌ಗೆ ವಯಸ್ಸು ಐವತ್ತೈದು ದಾಟಿತ್ತು. ಈಗಾಗಲೇ ಅವನು ಹಲವು ಯುದ್ಧಗಳಲ್ಲಿ ಜಯ ಗಳಿಸಿ, ಪ್ರಸಿದ್ದ ಯೋಧನೆಂದು, ಆಡಳಿತಗಾರನೆಂದು ಹೆಸರು ಪಡೆದಿದ್ದ. ಆದರೆ ಅವನಿಗೆ ಸಾಮ್ರಾಟತನದ ಬಗ್ಗೆ ಇಬ್ಬಂದಿತನವಿತ್ತು. ರೋಮಿನಿಂದ ದೂರದ ಕಾಫಿ ಎಂಬ ಒಂದು ದ್ವೀಪದಲ್ಲಿ ಐಷಾರಾಮವಾಗಿಯೇ ಹೆಚ್ಚು ಕಾಲವನ್ನು ಕಳೆಯುತ್ತಿದ್ದ. ಅದಕ್ಕೆ ಅವನ ಪತ್ನಿಯ (ಜೂಲಿಯಾ) ದುರ್ನಡತೆಯೂ ಒಂದು ಕಾರಣವಿರಬಹುದು. ಟೈಬೀರಿಯಸ್ ಬಹಳ ಕ್ರೂರಿಯಾಗಿ ಮಾರ್ಪಟ್ಟು ಹಲವರನ್ನು ಕೊಲ್ಲಿಸಿದ, ಇನ್ನು ಹಲವರನ್ನು ಸೆರೆಯಲ್ಲಿರಿಸಿದ. ಇದರಿಂದಾಗಿ ಜನ ಅವನ ವಿರುದ್ಧ ತಿರುಗಿಬಿದ್ದರು. ಅವನನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಯಿತು ಎನ್ನುವುದು ವದಂತಿ. ಅದರಲ್ಲಿ ಬಹುಶಃ ಕಲಿಗುಲನ ಕೈವಾಡ ಇದ್ದಿರಬಹುದು. ನಂತರ ಅಧಿಕಾರಕ್ಕೆ ಬರುವವನೇ ಕಲಿಗುಲ.
ಕಲಿಗುಲನ ಬಗ್ಗೆಯೂ ತಿರುಮಲೇಶರು ಪ್ರತ್ಯೇಕ ನಾಟಕ ಬರೆದಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.
©2024 Book Brahma Private Limited.