ಬೇಲೂರು ರಘುನಂದನ್ ಅವರ ನಾಟಕ ‘ರಕ್ತವರ್ಣೆ’ ಒಂದು ಅಪರೂಪದ ಕಲಾಕೃತಿ. ಕಾಣಿಸುವ, ಕೇಳಿಸುವ ಮತ್ತು ಅಭಿವ್ಯಕ್ತಿಯಲ್ಲಿ ಕಲಾತ್ಮಕತೆಯನ್ನು ಹೊಂದಿರುವ ಸಶಕ್ತ ನಾಟಕ ರಕ್ತವರ್ಣೆ. ತನ್ನ ಕಾವ್ಯ ದಿಂದ ಈಗಾಗಲೇ ಚಿರ ಪರಿಚಿತರಾದ ರಘುನಂದನ್, ರಕ್ತವರ್ಣೆ ನಾಟಕದ ಮೂಲಕ ರಂಗಭೂಮಿಗೆ ಒಂದು ವಿಶಿಷ್ಟ ಸಂವೇದನೆಯ ಕಲಾಕೃತಿಯನ್ನು ಕೊಟ್ಟಿದ್ದಾರೆ. ಸ್ವತಃ ಕವಿಯಾದ್ದರಿಂದ ನಾಟಕದ ಭಾಷೆ ಅತ್ಯಂತ ಕಾವ್ಯಮಯವಾಗಿದೆ. ಈ ನಾಟಕದ ವಸ್ತು, ಪಾತ್ರ, ತಂತ್ರ, ಸನ್ನಿವೇಶ ಇವನ್ನೊಳಗೊಂಡ ಒಟ್ಟೂ ಸಾರಾಂಶದ ಐರನಿ ಎಲ್ಲರ ಉಸಿರೊಳಗೆ ಉಸಿರಾಗುವ ಒಂದು ಮಾಂತ್ರಿಕ ಗುಣವನ್ನು ಹೊಂದಿದೆ. ಮಗುವೊಂದು ತನ್ನ ತಾಯಿಯ ತೊಡೆಯ ಮೇಲೆ ಜೋಗುಳವ ಕೇಳಿದ ಹಾಗೆ ಈ ನಾಟಕದ ಮಾತುಗಳು ಸಂಗೀತದ ಲಹರಿಯಲ್ಲಿ ಮುಳುಗಿಸಿದರೂ ಅದು ಎಚ್ಚರದ ತೀವ್ರತೆಯಲ್ಲಿ ನಮ್ಮನ್ನು ಹರಳುಗಟ್ಟಿಸುತ್ತದೆ.
ಇಲ್ಲಿಯ ಜಾತಿ ಧರ್ಮದ ಸಂಕಟಗಳು, ಮನಸ್ಸು ಮೈಲಿಗೆಯ ಮಾತುಗಳು ಬಹಿರಂಗವಾಗಿ ಕಂಡರೂ ತಳ ಸಮುದಾಯದ ಆಂತರ್ಯದಲ್ಲಿ ಮಾನವೀಕರಣಗೊಳ್ಳುತ್ತಾ ಎಲ್ಲರ ಮನಸ್ಸುಗಳನ್ನು ಕಟ್ಟುವ ಕೆಲಸವನ್ನು ಮಾಡುತ್ತಾರೆ. ಧರ್ಮಶಾಸ್ತ್ರಗಳು ನಮ್ಮನ್ನ ಬೇರೆ ಬೇರೆ ಮಾಡಬಹುದು. ಆದರೆ ಈ ನೆಲೆ ಮತ್ತು ನೀರು ನಮ್ಮನ್ನು ಬೇರ್ಪಡಿಸುವುದಿಲ್ಲ ಎನ್ನುವಂತೆ ಒಂದು ಹೆಣ್ಣಿನ ಸೂಕ್ಷ್ಮ ಮನಸಿನ ವಿರಾಟ ದರ್ಶನದ ಮೂಲಕ, ನಾಟಕ ಮನುಷ್ಯನ ಸಣ್ಣತನಗಳನ್ನು ಬಯಲು ಮಾಡುತ್ತಾ ನಮ್ಮನ್ನೆಲ್ಲಾ ವಿವೇಕದ ಹಾದಿಯಲ್ಲಿ ನಡೆಯುವಂತೆ ಮಾಡುತ್ತದೆ. ಈ ನಾಟಕ ಜನಸಾಮಾನ್ಯರ ರಸವಿವೇಚನೆಯನ್ನು ಒಳಗೊಂಡಂತೆ ಒಂದು ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸುವಲ್ಲಿ ಸಾಫಲ್ಯಗೊಂಡಿದೆ. ಇಲ್ಲಿ ನಾಟಕಕಾರ ತನ್ನ ಸೃಜನಶೀಲತೆಯ ಮೂಲಕ ಕಲ್ಲನ್ನು ಮೇಣದಂತೆ ಕರಗಿಸಿ ಯಶಸ್ವಿ ಶಿಲ್ಪಕಾರನಾಗಿ ಹೊರಹೊಮ್ಮಿದ್ದಾರೆ. ರಕ್ತವರ್ಣೆ ಓದುತ್ತಲೇ ನೋಡುವ ನಾಟವೂ ಹೌದು. ನೋಡಿ ಅರ್ಥ ಮಾಡಿಕೊಳ್ಳುವ ಅರಿವಿನ ನಾಟಕವೂ ಹೌದು. ಈ ಹೊತ್ತಿನ ಅನೇಕ ತಲ್ಲಣಗಳಿಗೆ ಕಲಾವಿದ ಮತ್ತು ಲೇಖಕ ತನ್ನ ಬರವಣಿಗೆಯ ಮೂಲಕ ಉತ್ತರ ಹುಡುಕುತ್ತಲೇ ಇದ್ದಾನೆ. ಇಂತಹ ಕ್ಲಿಷ್ಟ ಸಾಮಾಜಿಕ ಸಂದರ್ಭದ ಸಂಕೀರ್ಣ ಸಮಸ್ಯೆಗಳಿಗೆ ರಕ್ತವರ್ಣೆ ಎಲ್ಲರ ಕಣ್ಣು ಮತ್ತು ಮನಸ್ಸಿಗೆ ಮಿಂಚು ಹರಿಸುವುದರಲ್ಲಿ ಯಶಸ್ವಿಯಾಗಿದೆ.
©2024 Book Brahma Private Limited.