ಪ್ರಾಧ್ಯಾಪಕನ ಪೀಠದಲ್ಲಿ

Author : ಬಿ.ಜಿ.ಎಲ್. ಸ್ವಾಮಿ

Pages 184

₹ 135.00

Buy Now


Year of Publication: 2019
Published by: ವಸಂತ ಪ್ರಕಾಶನ
Address: ನಂ 360, 10ನೇ ಬಿ- ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಜಯನಗರ, ಬೆಂಗಳೂರು-11

Synopsys

ಲೇಖಕ ಬಿ.ಜಿ.ಎಲ್. ಸ್ವಾಮಿ ಅವರು ಬರೆದ ಹಾಸ್ಯ ಪ್ರಧಾನವಾದ ತಮ್ಮ ಅನುಭವಗಳನ್ನು ಒಳಗೊಂಡ ಲೇಖನಗಳ ಕೃತಿ-ಪ್ರಾಧ್ಯಾಪಕರನ ಪೀಠದಲ್ಲಿ. ಲೇಖಕರು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿದ್ದಾಗ ಅನುಭವಿಸಿದ ಘಟನೆಗಳನ್ನು-ಸನ್ನಿವೇಶಗಳನ್ನು ಇಲ್ಲಿ ಹಾಸ್ಯಮಯವಾಗಿ ದಾಖಲಿಸಿದ್ದಾರೆ. ಕಾಲೇಜಿನ ಪ್ರಾಂಶುಪಾಲರ ಇಂಗ್ಲಿಷ್ ಭಾಷಾ ವ್ಯಾಮೋಹ, ತಮಿಳರ ತಮಿಳು ಭಾಷಿಕರ ದುರಭಿಮಾನ ಹೇಗಿರುತ್ತದೆ? ಹಿರಿಯ ಆಡಳಿತಾಧಿಕಾರಿಯಲ್ಲಿ ಸಾಮಾನ್ಯ ಜ್ಞಾನದ ಸ್ವರೂಪವನ್ನು ಹಾಸ್ಯಮಯವಾಗಿ ನಿರೂಪಿಸಿದ್ದು ಈ ಕೃತಿಯ ಹೆಗ್ಗಳಿಕೆ.

About the Author

ಬಿ.ಜಿ.ಎಲ್. ಸ್ವಾಮಿ
(05 February 1916 - 02 November 1980)

ಬಿ. ಜಿ. ಎಲ್. ಸ್ವಾಮಿ ಅಂತರ್‌ರಾಷ್ಟ್ರೀಯ ಮಟ್ಟದ ಸಸ್ಯವಿಜ್ಞಾನಿ, ಹಿರಿಯ ವಿದ್ವಾಂಸ, ಸಾಹಿತಿ, ಚಿಂತನಶೀಲ ಬರಹಗಾರ ಡಾ. ಬಿ.ಜಿ.ಎಲ್‌. ಸ್ವಾಮಿ.  `ಶ್ರೇಷ್ಠ ವಿಜ್ಞಾನಿ' ಎಂದು ಹೆಸರಾಗಿದ್ದ ಖ್ಯಾತ ಸಂಶೋಧಕ ಸ್ವಾಮಿ ಅವರ ಪೂರ್ಣ ಹೆಸರು ’ಬೆಂಗಳೂರು ಗುಂಡಪ್ಪ ಲಕ್ಷ್ಮೀನಾರಾಯಣಸ್ವಾಮಿ’. ಕನ್ನಡದ ಹಿರಿಯ ಸಾಹಿತಿ ಡಿವಿಜಿಯವರ ಪುತ್ರ. 1916ರ ಫೆಬ್ರುವರಿ ಐದರಂದು ಜನಿಸಿದ ಅವರು ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡರು. ತಂದೆಯ ಗುಂಡಪ್ಪ ಹಾಗೂ ಅವರ ಗ್ರಂಥ ಭಂಡಾರದಿಂದ ಪ್ರತಿಭಾನ್ವಿತರಾದ ವ್ಯಕ್ತಿ. ಪ್ರಾಥಮಿಕದಿಂದ ಪದವಿಯವರೆಗೆ ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ ಅವರು ಸೆಂಟ್ರಲ್ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ವಿದ್ಯಾರ್ಥಿ ಆಗಿರುವಾಗ ಕರ್ನಾಟಕ ಸಂಘದ ಕಾರೈದರ್ಶಿ ...

READ MORE

Reviews

‘ಪ್ರಾಧ್ಯಾಪಕನ ಪೀಠದಲ್ಲಿ’ ಕೃತಿಯ ವಿಮರ್ಶೆ

ತಮಿಳು ಮಾತೃ ಭಾಷೆಯಾಗಿದ್ದೂ ಸಹ
ಅತ್ಯಂತ  ಸರಳ ಕನ್ನಡದಲ್ಲಿ , ವೈಶಿಷ್ಟ್ಯ ಪೂರ್ಣವಾಗಿ, ಚಿಂತನಾರ್ಹ ಲೇಖನಗಳನ್ನು ಬರೆದವರಲ್ಲಿ ಡಾ.  ಬಿ ಜಿ ಎಲ್ ಸ್ವಾಮಿ ಕೂಡ ಒಬ್ಬರು.

"A Botanist with a big B" ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕಾರ್ನರ್ ಅವರಿಂದ ಮೆಚ್ಚುಗೆ ಪಡೆದ  ಅಂತಾರಾಷ್ಟ್ರೀಯ ಖ್ಯಾತಿಯ ಸಸ್ಯ ಶಾಸ್ತ್ರಜ್ಞ.
ಮೂಲ ಹುಡುಕುವ, ತಳ ಬುಡ ಸೋಸುವ ಅನ್ವೇಷಣಾ ಪ್ರವೃತ್ತಿಯಿಂದಾಗಿ ಗಮನ ಸೆಳೆಯುತ್ತಾರೆ.

ಒಂದು ವಸ್ತು ಅಥವಾ ವಿಷಯದ  ವೈಜ್ಞಾನಿಕ ಮಾಹಿತಿ, ಇತಿಹಾಸದ ಬೇರುಗಳು, ವರ್ತಮಾನದ ಪ್ರಸ್ತುತತೆ ಹೀಗೆ ತಲಸ್ಪರ್ಶಿ ಅಧ್ಯಯನ ಮಾಡುವ  ಸ್ವಾಮಿ ಸರ್ , ಫ಼ುಲ್ ಮೀಲ್ಸ್ ನ ರಸದೌತಣವನ್ನು ಲವಲವಿಕೆಯಿಂದ  ಆಸಕ್ತ ಓದುಗರಿಗೆ ಬಡಿಸುತ್ತಾರೆ!

ಈ ಸಸ್ಯ ಶಾಸ್ತ್ರಜ್ಞನ ಪ್ರತಿಭೆಗೆ ಹಲವಾರು ಮುಖಗಳು! ಅದ್ಭುತ ರೇಖಾ ಚಿತ್ರಕಾರರೂ ಹೌದು!  'ಅಮೆರಿಕಾದಲ್ಲಿ ನಾನು' ಪ್ರವಾಸ  ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಡಿಯಿಟ್ಟ ಸ್ವಾಮಿ ಸರ್  ಆ ಪುಸ್ತಕದಲ್ಲಿ ತಮ್ಮದೇ ದೃಷ್ಟಿಕೋನದಿಂದ  ಕಲಾತ್ಮಕವಾಗಿ ಚಿತ್ರಗಳನ್ನು ರಚಿಸಿ ಕೃತಿಯ ಮಹತ್ತನ್ನು ಹೆಚ್ಚಿಸುತ್ತಾರೆ.
ಚರಿತ್ರೆ, ಸಂಗೀತ, ವಾಸ್ತುಶಿಲ್ಪ ವಿಷಯಗಳಲ್ಲೂ ಅವರಿಗೆ ಆಸಕ್ತಿಯಿತ್ತು.
 
ಸಸ್ಯ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅನುಪಮ ಕೊಡುಗೆಗಾಗಿ ಭಾರತ ಸರ್ಕಾರವು ' ಬೀರಬಲ್ ಸಾಹ್ನಿ ಸ್ವರ್ಣ ಪದಕ' ವನ್ನು ನೀಡಿ ಗೌರವಿಸಿದೆ.

ಮದರಾಸಿನ ಪ್ರತಿಷ್ಟಿತ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದಾಗಲೂ  ದೊಗಲೆ ಜುಬ್ಬ , ಪೈಜಾಮಾ ಧರಿಸುವ ಸರಳಾತಿ ಸರಳ , ಸ್ವಾಮಿ ಸರ್  ಸಂಕೀರ್ಣ  ಸತ್ಯಗಳನ್ನು ಪ್ರಸ್ತುತ ಪಡಿಸುವ ರೀತಿಯೇ ಅನನ್ಯವಾದುದು! 

ಮಂಕುತಿಮ್ಮನ ಕಗ್ಗದ ಡಿವಿಜಿಯವರ ವರಪುತ್ರ ಬಿ ಜಿ ಎಲ್ ಸ್ವಾಮಿ  ಭೌತಿಕವಾಗಿ ಮಂಕುತಿಮ್ಮನಂತೆ ಕಂಡರೂ , ಭೌಧ್ಧಿಕವಾಗಿ, ತಾತ್ವಿಕವಾಗಿ ಅವರು ದೈತ್ಯರೇ!

ತಮ್ಮ ಐದನೇ ವಯಸ್ಸಿನಲ್ಲಿಯೇ  ಬೆಂಕಿಯ ಅಪಘಾತದಲ್ಲಿ ತಾಯಿಯನ್ನು  ಕಳೆದುಕೊಂಡ ಸ್ವಾಮಿಯವರು  ತಂದೆಯವರ ಪುಸ್ತಕ ಭಂಡಾರದಲ್ಲಿ  ತಮ್ಮ ವ್ಯಕ್ತಿತ್ವಕ್ಕೆ ಸಾಣೆ ಹಿಡಿದರು.

ಕನ್ನಡ , ಇಂಗ್ಲಿಷ್ ಹಾಗೂ ತಮಿಳು ಭಾಷೆಗಳಲ್ಲಿ  ಸತ್ವಯುತವಾಗಿ ಬರೆಯುತ್ತಿದ್ದ  ಸ್ವಾಮಿಯವರು ಉತ್ತಮ ಅನುವಾದಕರೆಂದು ಪ್ರಸಿದ್ದರಾಗಿದ್ದರು.  ಶಿವಶರಣರ ವಚನಗಳನ್ನು , ಪುರಂದರದಾಸರ ಕೀರ್ತನೆಗಳನ್ನು ತಮಿಳಿಗೆ ಅನುವಾದಿಸಿದ್ದರು! 

ಫ಼ಲಶ್ರುತಿ, ನಮ್ಮಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ, ಹಸುರು ಹೊನ್ನು, ಕಾಲೇಜು ರಂಗ, ಕಾಲೇಜು ತರಂಗ, ತಮಿಳು ತಲೆಗಳ ನಡುವೆ,  ಪ್ರಾಧ್ಯಾಪಕನ ಪೀಠದಲ್ಲಿ, ಬೃಹದಾರಣ್ಯಕ, ಪಂಚ ಕಲಶ ಗೋಪುರ... ಇತ್ಯಾದಿ ಕೃತಿಗಳಲ್ಲಿ ಸ್ವಾಮಿತನವನ್ನು ಗುರುತಿಸಬಹುದು. 

'ಪ್ರಾಧ್ಯಾಪಕನ ಪೀಠದಲ್ಲಿ' ಈಚೆಗೆ ನಾನು ಓದಿದ  ಅವರ ಕೃತಿ. 
 ಶಿಕ್ಷಣ ಕ್ಷೇತ್ರದಲ್ಲಿ ನಾನೂ ಕಾರ್ಯ ನಿರ್ವಹಿಸಿದ್ದವಳಾದ್ದರಿಂದ , ವಾಸ್ತವಕ್ಕೆ ಕನ್ನಡಿ ಹಿಡಿದಿರುವುದರಿಂದ  ಈ ಪುಸ್ತಕದ ಓದು ನನಗೆ ಅಪಾರ ಸಂತಸವನ್ನು ಕೊಟ್ಟಿತು.

ಈ ಪುಸ್ತಕದಲ್ಲಿ 
ಡಿಪಾರ್ಟ್‌ಮೆಂಟಿನ ಹೆಡ್(ಡ್ಡ)ನಾಗಿ , ನಿಯೋಗದ ಸದಸ್ಯನಾಗಿ,  
ವಿಧಿವಿಲಾಸಗ್ರಸ್ಥನಾಗಿ  ಹೀಗೆ ಮೂರು ವಿಭಾಗಗಳಿದ್ದು ಇಪ್ಪತ್ತೇಳು ಅಧ್ಯಾಯಗಳಿವೆ.

 ಮೊದಲನೆಯ ಅಧ್ಯಾಯವೇ
 "ಸಮ್- ಹೌ".
ಅನಕ್ಷರತೆಯ ನಿರ್ಮೂಲನ ಹಾಗೂ ಸಾಕ್ಷರತೆಯ ಪ್ರಸಾರಕ್ಕಾಗಿ ವಿದ್ಯಾರ್ಥಿಗಳ ಸಂಖ್ಯೆಯನ್ನಷ್ಟೆ ದ್ವಿಗುಣಗೊಳಿಸಿದರಾಗುವ ಅವ್ಯವಸ್ಥೆಯನ್ನು ಬಿಂಬಿಸುತ್ತದೆ!
ಸರ್ಕಾರದಿಂದ ಹೊಸ ಕಟ್ಟಡ, ಹೊಸ ಅಧ್ಯಾಪಕರು, ಹೊಸ ಯಂತ್ರೋಪಕರಣ ಮತ್ತು ಪೀಠೋಪಕರಣ  ಹೀಗೆ ಯಾವುದೇ  ಆರ್ಥಿಕ ನೆರವನ್ನೂ ನಿರೀಕ್ಷಿಸದೆ you have to manage somehow ಎನ್ನುವ ಅಧಿಕಾರ ವರ್ಗದ  ತಿಕ್ಕಲುತನಗಳನ್ನು ತಿಳಿ ಹಾಸ್ಯದಲ್ಲಿ  ವಿಡಂಬಿಸುವ ಲೇಖನವಿದು! 

ಮುಂದಿನ ಅಧ್ಯಾಯದಲ್ಲಿ ಸೀನಿಯರ್ ಅಧ್ಯಾಪಕರ  ಆಲಸ್ಯ,  ಉಡಾಫ಼ೆ,  ಬೇಜವಾಬ್ದಾರಿತನಗಳನ್ನು   ಗುರುತಿಸಿ,  ಅವರೆಲ್ಲರ ವಿಶ್ವಾಸಗಳಿಸಿ ತಮ್ಮೊಂದಿಗೇ ಕರೆದೊಯ್ದು ಸಂಶೋಧನೆಯ ಮಟ್ಟವನ್ನು, ಬರವಣಿಗೆಯ ಭಾಷೆಯನ್ನು ಉತ್ತಮಿಕೆಗೊಳಿಸುವ  ಸಫ಼ಲ ಪ್ರಯತ್ನಗಳಿವೆ !

ಆನಂತರದ ಅಧ್ಯಾಯಗಳಲ್ಲಿ ಪ್ರಯೋಗ ಶಾಲೆಯ ಅಟೆಂಡರುಗಳ ಅಟ್ಟಹಾಸ, ಬಿಲ್ ಪಾಸು ಮಾಡಲು ಗುಮಾಸ್ತರ ಕಿರಿಕಿರಿ,  ಕುರ್ಚಿಗೇ ಅಂಟಿ ಕುಳಿತುಕೊಳ್ಳುವ ಪ್ರಾಧ್ಯಾಪಕರು, ಅಪ್ಡೇಟ್ ಆಗದೆ ಓಬೀರಾಯನ ಕಾಲದ  ಟಿಪ್ಪಣಿಗಳನ್ನೇ ಬಳಸುವ  ಉಪನ್ಯಾಸಕರು,  ಕನಿಷ್ಟ ಕೆಲಸ  ಹಾಗೂ ಗರಿಷ್ಠ ಸಂಭಾವನೆಯ ಸೂತ್ರಕ್ಕೆ  ತಲೆ ಬಾಗಿದವರು, ಮೌಲ್ಯ ಮಾಪನ  ಕಾರ್ಯದಲ್ಲಿ  ಬೇಜವಾಬ್ದಾರಿಯಿಂದ ವರ್ತಿಸುವ ಶಿಕ್ಷಕ ವರ್ಗ,   ಕಾಲೇಜಿನ ಪ್ರೊಫ಼ೆಸರುಗಳನ್ನು ಜ್ಞಾನ ಶೂನ್ಯರೆಂದೂ ತಮ್ಮನ್ನು ಸರ್ವಜ್ಞ ಬ್ರಹ್ಮರಂತೆ ಬಿಂಬಿಸಿಕೊಳ್ಳುವ  ಯೂನಿವರ್ಸಿಟಿಯ ಪ್ರೊಫೆಸರುಗಳು , ಮೂಲ ಸೌಕರ್ಯಗಳೇ ಇಲ್ಲದ ಕಾಲೇಜುಗಳನ್ನು ತೆರೆಯುವ ಆಡಳಿತ ಮಂಡಳಿಗಳು ಅನುಮತಿಗಾಗಿ ಅಡ್ಡದಾರಿಯಲ್ಲಿ ಪ್ರಯತ್ನಿಸುವುದು,  ವಿದೇಶಿ ಯಾತ್ರೆಯೇ ಜೀವನದ ಪರಮೋದ್ದೇಶವೆಂದು ಭಾವಿಸಿ  ಅಧಿಕಾರಿ ವರ್ಗದವರನ್ನು ಓಲೈಸುವವರು,  ಪ್ರಾಮಾಣಿಕವಾಗಿ ಪಾಠ ಹೇಳುವ ಮತ್ತು  ವಿದ್ಯಾರ್ಥಿಗಳ ಶ್ರೇಯೋಭಿಲಾಷೆಗಾಗಿ ದುಡಿಯುವ  ಶಿಕ್ಷಕರ ಬಗ್ಗೆ ಮತ್ಸರಿಸುವ ಹಾಗೂ ಸಲ್ಲದ ಅಪಪ್ರಚಾರ ಮಾಡುವ  ಅಧ್ಯಾಪಕರ ಸಣ್ಣತನಗಳು...
ಹೀಗೆ ಶಿಕ್ಷಣ ಸಂಸ್ಥೆಗಳ ಅಂತರಂಗವನ್ನು  ಹಾಸ್ಯದ ಮೂಲಕ ಬಹಿರಂಗವಾಗಿಸಿದ್ದಾರೆ ಬಿ ಜಿ ಎಲ್ ಸ್ವಾಮಿ.

ತಿಳಿಹಾಸ್ಯದ ಮೂಲಕ ತಿಳುವಳಿಕೆಯನ್ನು ನೀಡುವ, ಅವ್ಯವಸ್ಥೆಯಲ್ಲಿನ ಲೋಪ ದೋಷಗಳನ್ನು ಸರಿಪಡಿಸುವ ಹೃದಯದ ಮಿಡಿತವೂ  ಇಲ್ಲಿ ಕೇಳಿಸುತ್ತದೆ! 

ಪ್ರವಾಸ , ವಿಚಾರ ಸಂಕಿರಣಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಗಾಗಿ ಸ್ವಾಮಿ ಸರ್ ಅವರ ಶ್ರಮ,  ಆಸಕ್ತಿ, ಅಭಿರುಚಿಗಳೂ  ಇಲ್ಲಿ ಕಂಡು ಬರುತ್ತವೆ.

'ವಿದ್ಯಾರ್ಥಿ ಮುಷ್ಕರದ ಒಂದು ಪ್ರಕರಣ' ಲೇಖನದಲ್ಲಿ ವ್ಯಂಗ್ಯ ಮತ್ತು ವಿಡಂಬನೆಯ ಭಾಷೆ ಗಮನ ಸೆಳೆಯುತ್ತದೆ. 

ಹಿಂದಿ ಭಾಷೆಯ ವಿರುದ್ದ ತಮಿಳುನಾಡಿಗೆ ತಮಿಳುನಾಡೇ ಪ್ರತಿಭಟನೆ , ಪ್ರದರ್ಶನದಲ್ಲಿ ತೊಡಗಿದ್ದಾಗ ಪ್ರೆಸಿಡೆನ್ಸಿ ಕಾಲೇಜಿನ ತಮಿಳು ಪ್ರಾಧ್ಯಾಪಕ , ವಿದ್ಯಾರ್ಥಿಗಳ ಪೇಪರ್ ಬಾಣದಿಂದ ರೋಸಿ "ಕೊಳೆತ ತಲೆಯ ಕತ್ತೆಗಳಾ" ಎಂದು ಬೈದದ್ದು ರಾದ್ದಾಂತವೇ ಆಯ್ತು!   ವಿದ್ಯಾರ್ಥಿಗಳು ಬಾಗಿಲೊಡೆದು ಒಳ ನುಗ್ಗುವ ಸನ್ನಾಹದಲ್ಲಿದ್ದಾಗ ಸಹೋದ್ಯೋಗಿಯ ಸಹಕಾರದಿಂದ  ಸ್ವಾಮಿ ಸರ್ ಅವರ  ರೂಮಿನಲ್ಲಿ  ದೊಡ್ಡ ಮರದ ಬೀರುವಿನಲ್ಲಿ ಬಚ್ಚಿಟ್ಟರು. ನಂತರ ಪರಿಸ್ಥಿತಿ ತಿಳಿಯಾದ ಮೇಲೆ, ಆ ತಮಿಳು ಪ್ರಾಧ್ಯಾಪಕ  ಸ್ವಾಮಿಯವರ ವಿರುದ್ದ ಪ್ರಾಚಾರ್ಯರಿಗೆ,  "ಗುಂಪಿನ ಪುಂಡುಗಾರಿಕೆಯಿಂದ ಸ್ವಾಮಿಯವರು ನನ್ನನ್ನು  ಕಾಪಾಡಿದರಾದರೂ , ನನ್ನನ್ನು ಮರದ ಬೀರುವಿನಲ್ಲಿ ಅಡಗಿಸಿಟ್ಟಿದ್ದರಿಂದ  ನನ್ನ ಸ್ಥಾನಮಾನ , ಗೌರವ, ಪ್ರತಿಷ್ಟೆಗಳಿಗೆ ಧಕ್ಕೆ ಆಗಿದೆ" ಎಂದು ದೂರು ಕೊಟ್ಟದ್ದನ್ನು ಸ್ಮರಿಸುತ್ತಾರೆ. ಅಲ್ಲದೆ ಆ ದೂರಿಗೆ ತಾವು ಕೊಟ್ಟ ಪ್ರತ್ಯುತ್ತರದ   ಬಗ್ಗೆಯೂ ಬರೆಯುತ್ತಾರೆ ಸ್ವಾಮಿ... "ಆಗ ಇದ್ದ ತುರ್ತು ಪರಿಸ್ಥಿತಿಯಲ್ಲಿ, ಉಸಿರು ಕಟ್ಟುವ ಕಬ್ಬಿಣದ  ಬೀರುಗಳಿಂದ ಮತ್ತೊಂದು ತುರ್ತು  ಎದುರಾಗುವುದು ಬೇಡ ಎಂದೇ ಈ ವ್ಯವಸ್ಥೆಯಾಯಿತು! ಮುಂದೆಂದಾದರೂ ಅಂಥ ಸಂದರ್ಭ ಬಂದಲ್ಲಿ ತಮಿಳು ಪ್ರಾಧ್ಯಾಪಕರನ್ನು ಸಂರಕ್ಷಿಸುವುದಕ್ಕಾಗಿ ವಜ್ರ ವೈಢೂರ್ಯ ಖಚಿತವಾದ ಚಿನ್ನದ ಬೀರುವೊಂದನ್ನು  ಸರಬರಾಜು  ಮಾಡಬೇಕೆಂದೂ, ಪ್ರಾಧ್ಯಾಪಕ ರತ್ನವನ್ನು ಅದರಲ್ಲಿಟ್ಟರೆ,  ಬೀರುವಿನ ಸ್ಥಾನ ಮಾನ, ಗೌರವ, ಪ್ರತಿಷ್ಟೆಗಳೂ   ಹೆಚ್ಚುತ್ತವೆ "  ಎಂದು ಎದುರೇಟು ಕೊಟ್ಟಿದ್ದನ್ನು ಓದಿದಾಗ ಮೊಗದಲ್ಲೊಂದು ವಿಷಾದದ ಕಿರುನಗೆಯೊಂದಿಗೆ ನಿಟ್ಟುಸಿರು ಮೂಡುತ್ತದೆ!

ವಿರೋಧ ಪಕ್ಷದಲ್ಲಿದ್ದ ಎಂ ಜಿ ಆರ್ ಅವರ ಕೈ ಕುಲುಕಿದ್ದಕ್ಕೆ  ಸರ್ಕಾರಕ್ಕೆ ವರದಿ ಸಲ್ಲಿಸಬೇಕಾದ ಪ್ರಸಂಗವನ್ನು  ಸ್ವಾಮಿ ಸರ್ ಉಲ್ಲೇಖಿಸುತ್ತಾರೆ!

ಅವರ ಮನೆಯ ಹೆಣ್ಣು ನಾಯಿ ರೂಬಿ ಕಾಮರಾಜರ ಭಾವಚಿತ್ರವನ್ನು ನೋಡಿ ಬೊಗಳಿದ್ದಕ್ಕೆ ಸರ್ಕಾರಕ್ಕೆ ತಪ್ಪೊಪ್ಪಿಗೆ ಬರೆದುಕೊಟ್ಟ ಪ್ರಸಂಗವನ್ನು ಉತ್ಪ್ರೇಕ್ಷಿತ ಹಾಸ್ಯದಲ್ಲಿ ಚಿತ್ರಿಸುತ್ತಾರೆ! 

ಕೇಶಿರಾಜನ 'ಆನೆ ನಡೆದುದೇ ಮಾರ್ಗ' ಎಂಬಂತೆ ಇದ್ದವರು ಬಿ ಜಿಎಲ್ ಸ್ವಾಮಿ.  ಅವರನ್ನು ಅರ್ಥೈಸುವುದೇ ಒಂದು ಖುಷಿಯ ಅನುಭೂತಿ! 

(ಬರಹ : ಸಿ ಬಿ ಶೈಲಾ ಜಯಕುಮಾರ್)
 

Related Books