‘ಹೀಗಿದ್ದೇವೆ ನಾವು’ ಕೃತಿಯು ಜ್ಯೋತ್ಸ್ನಾ ಕಾಂತ್ ಅವರ ಲಲಿತ ಪ್ರಬಂಧಗಳ ಸಂಕಲನವಾಗಿದೆ. ಕೃತಿಯ ಹಿನ್ನೆಲೆಯಲ್ಲಿ ಈ ವಿಚಾರಗಳು ಹೀಗೆ ಪ್ರಸ್ತುತಗೊಂಡಿದೆ : ನಗು ಮತ್ತು ಅಳು, ಅತಿ ಸುಲಭವಾಗಿ ಗುರುತಿಸಬಹುದಾದಂತಹ ಮಾನವೀಯ ಭಾವನೆಗಳು, ಮಗು ಹುಟ್ಟಿದ ಆರನೆಯ ವಾರದಿಂದಲೇ ಹೊಸದೇನಾದರೂ ಕಂಡರೂ ಕಿಲಕಿಲನೆ ನಗಲಾರಂಭಿಸುವದು. ಈ ನಗು ನೇರ ಮತ್ತು ಅತ್ಯಂತ ಸಹಜವಾದದ್ದು. ವಿವಿಧ ಚಟುವಟಿಕೆಗಳಲ್ಲಿ ತೊಡಗಿದ ಮಾನವನು ಮೂವತ್ತು ಪ್ರಕಾರಗಳಲ್ಲಿ ನಗಬಲ್ಲನು, ಎಂದು ಹೇಳುತ್ತಾರೆ. ನಗುವ ಸಾಮರ್ಥ್ಯ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಉತ್ತೇಜಕ ಮನಸ್ಥಿತಿಯಲ್ಲಿದ್ದಾಗ ಮಾತ್ರ ನಗಲು ಸಾಧ್ಯವಿದ್ದುದರಿಂದ ವ್ಯಕ್ತಿಯ ಹಿನ್ನೆಲೆ, ಶಾರೀರಿಕ-ಮಾನಸಿಕ ಆರೋಗ್ಯ, ಆಸಕ್ತಿ, ಓದು, ಸಂಸ್ಕಾರ, ಸಂಸ್ಕೃತಿಗಳು ನಗುವಿನ ಪರಿಮಿತಿಗಳನ್ನು ನಿರ್ಧರಿಸುತ್ತವೆ. ಒ೦ದೇ ಸಂದರ್ಭಕ್ಕೆ ವಿವಿಧ ವ್ಯಕ್ತಿಗಳು ತೀರ ಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ. ನಸುನಗೆ, ಕಿರುನಗೆ, ಮೆಲುನಗೆ, ಮುಗುಳ್ನಗೆ, ಕುಲುಕುಲುನಗೆ, ಗಹ ಗಹಿಸುವ ನಗೆ, ಸ್ಫೋಟಕನಗೆ, ಹೊಟ್ಟೆ ಬಿರುಕ, ಅಟ್ಟಹಾಸ, ಇವುಗಳನ್ನೆ ಒಂದು ಸಮೂಹದಲ್ಲಿ ಏಕಕಾಲಕ್ಕೆ ಕಾಣಬಹುದಾಗಿದೆ. ಕೆಲವರು ಸದಾಕಾಲ ಮುಖಕ್ಕೆ ಗಂಟು ಹಾಕಿಕೊಂಡೇ ಇರಬಹುದು. ಲಾಭಕ್ಕಾಗಿ ವ್ಯಾಪಾರಿಬುದ್ಧಿಯವರು, ಕೃತಕ ನಗೆಯನ್ನು ರೂಢಿಸಿಕೊಂಡಿರುತ್ತಾರೆ. ಸಾಮಾಜಿಕ ಅಥವಾ ವ್ಯಕ್ತಿಗಳ ಓರೆ-ಕೋರೆಗಳನ್ನು ಗಮನಿಸುವ ನಿರಪಾಯದ, ಅರಿವಿನಿಂದ ಕೂಡಿದ ನಗುವನ್ನು ಶಬ್ದಗಳಲ್ಲಿ ಮೂಡಿಸುವದು ಕಷ್ಟ ಸಾಧ್ಯ. ತನ್ನ ತಾನು ಅರಿಯಲು ಇಂಥ ನಗು ತುಂಬ ಸಹಾಯಕಾರಿ. ಇಲ್ಲಿಯ ಲಲಿತ ಪ್ರಬಂಧಗಳಲ್ಲಿ ಈ ನಗುವಿಗೇ ಆದ್ಯತೆ ಮತ್ತು ಪ್ರಾಧಾನ್ಯತೆಯನ್ನು ಕೊಡಲಾಗಿದೆ’ ಎಂದು ಬಿಂಬಿಸಲಾಗಿದೆ.
©2025 Book Brahma Private Limited.