‘ಮೆಟ್ಟಿಲ ಮಹಿಮೆ’ ಕೃತಿಯು ಸೂತ್ರದಾರ ರಾಮಯ್ಯ ಅವರ ಹಾಸ್ಯಬರಹಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಕಲಾಕ್ಷೇತ್ರದ ಮೆಟ್ಟಿಲಿನೊಂದಿಗೆ ಸೂತ್ರಧಾರ ನಡೆಸುವ ಸಂಭಾಷಣೆಯ ರೂಪದಲ್ಲಿರುವ ಇಲ್ಲಿನ 73 ಹಾಸ್ಯಬರಹಗಳು ಕಳೆದ ಒಂದು ದಶಕದ ರಂಗಚಟುವಟಿಕೆಯನ್ನು ಮೆಚ್ಚುಗೆ, ವ್ಯಂಗ್ಯೋಕ್ತಿ, ಟೀಕೆ-ಟಿಪ್ಪಣಿಗಳೊಂದಿಗೆ ದಾಖಲಿಸುತ್ತದೆ. ಮೆಟ್ಟಿಲನ್ನು ರಂಗ ವ್ಯವಸ್ಥೆಯ ಪ್ರತೀಕವಾಗಿಸಿಕೊಂಡು ಸೂತ್ರಧಾರ ಒಟ್ಟು ರಂಗ ಚಟುವಟಿಕೆಯ ಸಾಕ್ಷಿಪ್ರಜ್ಞೆಯಂತೆ `ಪನ್‘ ಮಾಡುತ್ತ ಹೋಗುವ ಇಲ್ಲಿನ ಬರಹಗಳು ಕನ್ನಡದಲ್ಲಿ ವಿಶಿಷ್ಟವಾದವುಗಳು. ಎರಡು ದಶಕಗಳ ಹಿಂದೆ ರಂಗಭೂಮಿಗೆ ಮೀಸಲಾದ `ಸೂತ್ರಧಾರ ವಾರ್ತಾಪತ್ರ‘ಕ್ಕೆ ಈ ತರಹದ ಬರಹವನ್ನು ಆರಂಭಿಸಿದ ರಾಮಯ್ಯ, ಅದರಿಂದ ಎಷ್ಟು ಪ್ರಸಿದ್ಧರಾದರೆಂದರೆ ಅವರಿಗೆ ಸೂತ್ರಧಾರ ರಾಮಯ್ಯ ಎಂಬ ಹೆಸರೇ ಗಟ್ಟಿಯಾಯಿತು. ಮಧ್ಯೆ ನಿಂತಿದ್ದ ಬರಹಗಳನ್ನು ಪುನಃ ತಮ್ಮ `ಈ ಮಾಸ ನಾಟಕ‘ ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ಎಲ್. ಕೃಷ್ಣಪ್ಪ ಇವಕ್ಕೆ ಮತ್ತೊಂದು ರೀತಿಯ ಸೂತ್ರಧಾರರಾದರು. ಗುಜ್ಜಾರಪ್ಪ ಅವರ ವ್ಯಂಗ್ಯ ಚಿತ್ರಗಳ ಮೂಲಕ ಪುಸ್ತಕ ಸುಂದರವಾಗಿ ಮೂಡಿ ಬಂದಿದೆ' ಎಂದು ವಿಶ್ಲೇಷಿತವಾಗಿದೆ.
©2024 Book Brahma Private Limited.