ಲೇಖಕ ಗುರುಪ್ರಸಾದ ಕುರ್ತಕೋಟಿ ಅವರ ಹಾಸ್ಯ ಲೇಖನಗಳ ಸಂಕಲನ-’ಕೇಶಕ್ಷಾಮ’.ಕೃತಿಗೆ ಮುನ್ನುಡಿ ಬರೆದ ಭುವನೇಶ್ವರಿ ಹೆಗಡೆ ‘ ಉತ್ತರ ಕರ್ನಾಟಕದ ಭಾಷೆ , ಉತ್ತರ ಕನ್ನಡದ ಗಪ್ಪಣ್ಣ ಎರಡೂ ಗುರುಪ್ರಸಾದರ ಬರಹಗಳಲ್ಲಿ ಹಾಸ್ಯದ ಸಹಜ ಓಘವನ್ನು ತಂದಿತ್ತಿವೆ. ತಮ್ಮ ಮನೆಯ ನಾಯಿಗೆ ತಮ್ಮ ಬಾಸ್ ನ ಹೆಸರಿಟ್ಟು ಆಫೀಸಿನಲ್ಲಿನ ತಮ್ಮ ನಾಯಿಪಾಡನ್ನು ಮರೆಯುವ ಕಲ್ಪನೆಯೇ ಕಚಗುಳಿ ಕೊಡುವಂಥದ್ದು. ಇಂಥ ಅನೇಕ ಪ್ರಯೋಗಗಳು ಸಂಕಲನದುದ್ದಕ್ಕೂ ಕಾಣಬಹುದು. ’ಹಾಸ್ಯಬರವಣಿಗೆ ನೇಯ್ಗೆ ಇದ್ದಂತೆ. ತೀರಾ ಹತ್ತಿರಕ್ಕೆ ಹೆಣೆದರೆ ಗಂಟು, ಕಗ್ಗಂಟು ಆಗಿ ಸುಲಭತೆ, ಸುಪ್ರಿಯತೆಗಳನ್ನು ಕಳೆದುಕೊಳ್ಳುತ್ತದೆ; ಕೊಂಚ ಸಡಿಲ ಬಿಟ್ಟರೆ ಜಾಳುಜಾಳಾಗುತ್ತದೆ. ಯಾವ ಹಾಸ್ಯಬರಹವನ್ನು ಎಲ್ಲಿಯವರೆಗೆ ಎಳೆದು ಎಲ್ಲಿ ನಿಲ್ಲಿಸಬೇಕೆಂಬ ಅರಿವಿದ್ದರೆ ಮಾತ್ರ ಯಶಸ್ವಿ ಹಾಸ್ಯಲೇಖನ ಸಾಧ್ಯ. ಕುರ್ತಕೋಟಿಯದು ಈ ವಿಷಯದಲ್ಲಿ ಕುರ್ತೇಟು. ಈಗಿನ ಯಾವುದೇ ಕಾಮೆಡಿ (ಆಂಗ್ಲದಲ್ಲಿ ಅದನ್ನು ಕಾಮೆಡಿ ಎಂದೂ, ಹಾಸ್ಯಗಾರನನ್ನು ಕಮೆಡಿಯನ್ ಎಂದೂ ಕರೆದರೂ, ಅದೇಕೋ ಕನ್ನಡದಲ್ಲಿ ಕಾಮೆಡಿ ಮಿಡಿ ತೊಟ್ಟು ನಿಂತು ಕಾಮಿಡಿ ಆಗಿದೆ) ಪ್ರಸ್ತುತ ಕನ್ನಡ ಹಾಸ್ಯ ಅಶ್ಲೀಲತೆಯತ್ತ ವಾಲಿರುವ ಭಯದಲ್ಲಿರುವಾಗ ಅದರ ಸುಳಿವೂ ಇರದಂತಹ ಶುದ್ಧ ಹಾಸ್ಯವನ್ನು ಕಟ್ಟಿಕೊಟ್ಟಿರುವ ಗುರುಪ್ರಸಾದ ಕುರ್ತಕೋಟಿ ಅವರ ಶ್ರಮ ನನಗೆ ಮೆಚ್ಚುಗೆಯಾಯಿತು’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.