ನಕ್ಕು ಸುಮ್ಮನಾಗುವುದೇ ಕಾವ್ಯವಲ್ಲ! ಹಲವಾರು ಮಕ್ಕಳ ಕವನ ಸಂಕಲನಗಳನ್ನು ಪ್ರಕಟಿಸಿ ಈಗಾಗಲೇ ಪ್ರಸಿದ್ಧರಾಗಿರುವ ಡಾ.ಸಿ.ಎಂ.ಗೋವಿಂದರೆಡ್ಡಿಯವರ ‘ಜಡಿಮಳೆ’ ಸಂಕಲನದ ಹನಿಗವನಗಳನ್ನು ಮುನ್ನುಡಿಯ ನೆಪದಲ್ಲಿ ವಿಮರ್ಶಿಸುತ್ತ ಕೂರಲಾರೆ. ವಿಮರ್ಶಿಸುವಷ್ಟು ಪ್ರಬುದ್ಧತೆ ಅಥವಾ ವಿಮರ್ಶೆಯು ನನಗಿನ್ನೂ ದಕ್ಕಿಲ್ಲವೆಂದೇ ನನ್ನ ನಂಬಿಕೆ. ಹಾಗಾಗಿಯೇ ‘ನನ್ನ ಕಾಲದ’ ಸಾಹಿತ್ಯದ ಓದು ನನಗೆ ನಿರಾಳದ ಜೊತೆಗೆ ನಿರೀಕ್ಷೆಯನ್ನೂ ಉಳಿಸಿದೆ. ಹನಿಗವನವೆಂಬ ಪ್ರಕಾರದ ಸಮೃದ್ಧತೆಯೇ ಅದಕ್ಕಿರುವ ಜನಪ್ರಿಯತೆಯನ್ನು ತೋರಿಸುತ್ತದೆ. ಹನಿಗವನದ ಕುರಿತಾದ ತಮ್ಮ ಅಭಿಪ್ರಾಯವನ್ನು ತಮ್ಮದೇ ಆದ ‘ನೋಟ’ ಎಂಬ ಹನಿಗವನದಲ್ಲಿ ಸಮರ್ಪಕವಾಗಿ ವ್ಯಕ್ತಪಡಿಸಿದ್ದಾರೆ. ಹನಿಗವನಗಳು ಹೊಂದಿರುವ ವಸ್ತುವಿನ ಆಧಾರದ ಮೇಲೆ ಅವುಗಳನ್ನು ವಿಭಾಗೀಕರಿಸುವುದು ಸುಗಮ ಓದಿಗೆ ಮತ್ತಷ್ಟು ಸಹಾಯವಾಗಿದೆ. ಎಲ್ಲ ಕವನಗಳೂ ಪ್ರಾಸಬದ್ಧವಾಗಿವೆ. ಮಕ್ಕಳ ಕವನಗಳನ್ನು ಬರೆಯುವುದಲ್ಲಿ ಪಳಗಿರುವ ಕಾರಣದಿಂದಲೋ ಏನೋ ಭಾಷೆ ಸರಳವೂ ಸುಂದರವೂ ಆಗಿ ಗಮನ ಸೆಳೆಯುತ್ತದೆ. ಪ್ರಾಸವಿದ್ದರೂ ಕೆಲವು ಹೇಳಿಕೆಯ ಮಟ್ಟದಲ್ಲೇ ನಿಂತುಬಿಡುತ್ತವೆ. ಅಲ್ಲಲ್ಲಿ ಇಂಗ್ಲೀಷ್ ಪದಗಳೂ ಇಣುಕಿ ಕನ್ನಡದ ಸದ್ಯದ ಹೊರಳನ್ನು ಅಥವಾ ಬೆಳವಣಿಗೆಯನ್ನು ಸೂಚಿಸುತ್ತವೆ. ತಮ್ಮ ವಿಡಂಬನೆ, ಮೊನಚು, ಪಂಚು, ನವಿರಾದ ಹಾಸ್ಯಗಳಿಂದ ನನ್ನ ಗಮನ ಸೆಳೆದ ಒಂದಷ್ಟು ಹನಿಗವನಗಳನ್ನು ಉದಾಹರಿಸುತ್ತ ವಿಶ್ಲೇಷಿಸುವುದು ಸಮಂಜಸವೆನಿಸುತ್ತದೆ.
©2024 Book Brahma Private Limited.