ವಸಂತ ಕಣ್ಣಬೀರನ್ ಅವರು ಬರೆದ ಇಂಗ್ಲಿಷ್ ಲೇಖನಗಳನ್ನು ವಿಮರ್ಶಕಿ ಡಾ. ಎಂ.ಎಸ್. ಆಶಾದೇವಿ ಅವರು ಕನ್ನಡಕ್ಕೆ ಅನುವಾದಿಸಿದ ಕೃತಿ-ಹುದಗಲಾರದ ದುಃಖ. ವ್ಯಕ್ತಿ, ಪ್ರೀತಿ ಹಾಗೂ ವ್ಯಥೆಗಳ ನೆನಪು ಎಂಬುದು ಕೃತಿಯ ಉಪಶೀರ್ಷಿಕೆ. ಈ ವಿಷಯಗಳ ಸುತ್ತ ವ್ಯಕ್ತವಾದ ಭಾವನೆ, ವಿಚಾರಗಳು, ವಿಶ್ಲೇಷಣೆಗೆ ಒಳಗಾಗಿದ್ದು ಈ ಕೃತಿಯ ವಿಶೇಷತೆ.
ದಾಂಪತ್ಯ ಮತ್ತು ವೈಧವ್ಯ ಎರಡೂ ಹೆಣ್ಣಿನ ಮಟ್ಟಿಗೆ ವರವೂ, ಶಾಪವೂ ಆಗಿರುವ ಅಗ್ನಿದಿವ್ಯಗಳು. ವೈಧವ್ಯವಂತೂ ಅವಳ ಆಯ್ಕೆಯದಲ್ಲ, ಅನೇಕ ಬಾರಿ ದಾಂಪತ್ಯವೂ ಆಗಿರುವುದಿಲ್ಲ! ನಮ್ಮ ಸಮುದಾಯದಲ್ಲಿ ದಾಂಪತ್ಯ ಮತ್ತು ವೈಧವ್ಯ ವೈಯಕ್ತಿಕವೆಷ್ಟೋ ಅಷ್ಟೇ ಸಾಮಾಜಿಕವಾದದ್ದೂ ಹೌದು; ಸಾರ್ವಜನಿಕವಾದದ್ದೂ ಹೌದು. ತಮ್ಮ ಆಯ್ಕೆಯ ವೃತ್ತಿಯನ್ನು ಕುರಿತ ಉತ್ಕಟತೆಯನ್ನು ದಾಂಪತ್ಯದ ಏಳು ಬೀಳುಗಳಲ್ಲಿಯೂ, ವೈಧವ್ಯದ ಅಪರಿಹಾರ್ಯತೆಯಲ್ಲಿಯೂ ಉಳಿಸಿಕೊಳ್ಳುವುದು ಹೆಣ್ಣಿನ ಮಟ್ಟಿಗೆ ಅಪೂರ್ವ ಸಾಧನೆಯೇ.
ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣವಾದುದನ್ನು ಸಾಧಿಸಿದ ಭಾರತದ ಈ ಹನ್ನೆರಡು ಪ್ರಖ್ಯಾತ ಮಹಿಳೆಯರು ದಾಂಪತ್ಯ ಮತ್ತು ವೈಧವ್ಯವನ್ನು ಮುಖಾಮುಖಿಯಾದ ಪರಿಯನ್ನು ಕುರಿತ ಮುಕ್ತ ಸಂದರ್ಶನಗಳ ಕೃತಿ ಇದು. ಆತ್ಮವಂಚನೆಯಲ್ಲದ, ಆತ್ಮರತಿಯನ್ನು ನೀಗಿಕೊಂಡ, ಕೌಟುಂಬಿಕ ನೆಲೆಯನ್ನು ಉಳಿಸಿಕೊಳ್ಳುತ್ತಲೇ ವೃತ್ತಿಪರತೆಯನ್ನು ಸಾಧಿಸಿದ ಈ ಮಹಿಳೆಯರು ಹೆಣ್ಣಿನ ಆತ್ಮಗೌರವವನ್ನು ಹೆಚ್ಚಿಸಿದ ಗಟ್ಟಿಗಿತ್ತಿಯರು.
©2024 Book Brahma Private Limited.