ಬ್ರಿಟಿಷ್ ರ ಆಳ್ವಿಕೆಯ ಆರಂಭಿಕ ಹಂತದಲ್ಲಿ ಅಂದರೆ 1757 ರಿಂದ 1857 ರವರೆಗಿನ ಕಾಲಾವಧಿಯಲ್ಲಿ ಭಾರತದ ಆರ್ಥಿಕತೆಯ ಕುರಿತು ಚಿತ್ರಣ ನೀಡುವ ಕೃತಿಯನ್ನು ಇರ್ಫಾನ್ ಹಬೀಬ್ ಅವರು ಬರೆದಿದ್ದು, ಲೇಖಕ ಕೆ.ಎಂ. ಲೋಕೇಶ ಅವರು ಕನ್ನಡೀಕರಿಸಿದ್ದಾರೆ. ಕೃತಿಯ ಶೀರ್ಷಿಕೆ: ಭಾರತದ ಆರ್ಥಿಕತೆ ಬ್ರಿಟಿಷ್ ಆಳ್ವಿಕೆಯ ಪ್ರಾರಂಭಿಕ ಹಂತದಲ್ಲಿ - 1757-1857 (ಭಾರತದ ಜನ ಇತಿಹಾಸ – 25).
ಇತಿಹಾಸವನ್ನು ರಾಜರುಗಳ ಆಳ್ವಿಕೆಗಳ ಪಟ್ಟಿಯಾಗಿಸುವ ಬದಲು ಅದನ್ನು ನಿರ್ಮಿಸಿದ ಜನಗಳನ್ನೇ ಕೇಂದ್ರವಾಗಿರಿಸಿಕೊಂಡಿರುವ, ನಿಜವಾದ ಇತಿಹಾಸದ ವೈಜ್ಞಾನಿಕ, ವಸ್ತುನಿಷ್ಟ ಅಧ್ಯಯನದಿಂದ ಮೂಡಿಬರುತ್ತಿರುವ ಪುಸ್ತಕ ಸರಣಿ ಇದು. ಪ್ರೊ. ಇರ್ಫಾನ್ ಹಬೀಬ್ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದೆ. ಈ ಸರಣಿಯ ಕೃತಿಗಳನ್ನು ಕನ್ನಡದಲ್ಲಿ ‘ಭಾರತದ ಜನ ಇತಿಹಾಸ’ ಎಂಬ ಸರಣಿಯಾಗಿ `ಚಿಂತನ ಪುಸ್ತಕ’ ಪ್ರಕಟಿಸುತ್ತಿದೆ.
1757ರಲ್ಲಿ ಪ್ಲಾಸೀ ಕದನದೊಂದಿಗೆ ಭಾರತದಲ್ಲಿ ಆರಂಭವಾದ ಬ್ರಿಟಿಷ್ ಆಳ್ವಿಕೆಯ ಮೊದಲ ನೂರು ವರ್ಷಗಳಲ್ಲಿ ದೇಶದಲ್ಲಿ ಆದ ಆರ್ಥಿಕ ಬದಲಾವಣೆಗಳ ಇತಿಹಾಸವನ್ನು ಕಟ್ಟಿ ಕೊಡುತ್ತದೆ. ಇದರ ಒಂದು ಸರಿಯಾದ ಕಣ್ಣೋಟ ಸಿಗುವಂತಾಗಲು 18ನೇ ಶತಮಾನದ ಪೂರ್ವಾರ್ಧದಲ್ಲಿ, ಅಂದರೆ ವಸಾಹತುಶಾಹೀ ಆಳ್ವಿಕೆ ಆರಂಭವಾಗುವ ಮೊದಲಿನ ಆರ್ಥಿಕ ಪರಿಸ್ಥಿತಿಗಳನ್ನೂ ಇದರಲ್ಲಿ ಸ್ಥೂಲವಾಗಿ ಪರಿಶೀಲಿಸಲಾಗಿದೆ.
ಈ ಮಾಲಿಕೆಯ ಇತರ ಕೃತಿಗಳಂತೆ ಇದೂ ಇತಿಹಾಸದ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಓದುಗರನ್ನು ಗಮನದಲ್ಲಿಟ್ಟುಕೊಂಡು ರಚಿಸಿರುವ ಕೃತಿ. ಇದರಲ್ಲಿ ನಕ್ಷೆಗಳನ್ನೂ ಕನ್ನಡಕ್ಕೆ ಅಳವಡಿಸಲಾಗಿದೆ.
1857ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ನಡೆದ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ನಂತರ ನೇರವಾಗಿ ಬ್ರಿಟಿಷ್ ಸಾಮ್ರಾಜ್ಯದ ಆಳ್ವಿಕೆಗೆ ಒಳಗಾದ ನಂತರ ಮೊದಲ ಜಾಗತಿಕ ಮಹಾಯುದ್ಧದ ವರೆಗಿನ ಭಾರತದ ಆರ್ಥಿಕತೆ ಕುರಿತಾದ ಪ್ರೊ. ಹಬೀಬ್ ರವರೇ ಬರೆದ ಕೃತಿಯ ಅನುವಾದ ಭಾರತದ ಜನ ಇತಿಹಾಸ ಸರಣಿ-28 `ಭಾರತದ ಆರ್ಥಿಕತೆ 1858-1914’ ಈ ಮೊದಲೇ (ಡಿಸೆಂಬರ್ 2014) ಪ್ರಕಟವಾಗಿದ್ದು, ಅದನ್ನು ಅನುವಾದಿಸಿದ್ದ ಇತಿಹಾಸ ಪ್ರಾಧ್ಯಾಪಕ ಡಾ.ಕೆ.ಎಂ.ಲೋಕೇಶ್ ಅವರೇ ಇದನ್ನೂ ಅನುವಾದಿಸಿದ್ದಾರೆ.
©2024 Book Brahma Private Limited.