ಜೆಎನ್ ಯು ಅಂಗಳದಲ್ಲಿ ರಾಷ್ಟ್ರೀಯವಾದದ ಕ್ಲಾಸುಗಳು

Author : ಬಿ. ಶ್ರೀಪಾದಭಟ್

Pages 216

₹ 180.00




Year of Publication: 2020
Published by: ಕ್ರಿಯಾ ಮಾಧ್ಯಮ ಪ್ರೈ.ಲಿ
Address: 37/ಎ, 4ನೇ ಅಡ್ಡರಸ್ತೆ, ಮಹಾಲಕ್ಷ್ಮಿ ಬಡಾವಣೆ, ಬೆಂಗಳೂರು – 560 086
Phone: 9448578021

Synopsys

2016 ರಲ್ಲಿ ಜೆಎನ್‌ಯು ಮೇಲೆ ನಡೆದ ದಾಳಿಯ ಸಂದರ್ಭದಲ್ಲಿ ಜೆಎನ್‌ಯು ಅಧ್ಯಾಪಕರ ಸಂಘವು ಜೆಎನ್‌ಯು ಆಡಳಿತ ಬ್ಲಾಕಿನ ಅಂಗಳದಲ್ಲಿ ರಾಷ್ಟ್ರವಾದ ಕುರಿತ ವಿವಿಧ ಜ್ಞಾನಕ್ಷೇತ್ರಗಳ (ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಭಾಷಾಶಾಸ್ತ್ರ ಇತ್ಯಾದಿ) ಹಲವು ಪರಿಣತರಿಂದ ಉಪನ್ಯಾಸ ಮಾಲೆ ಏರ್ಪಡಿಸಿತು. ಈ ಉಪನ್ಯಾಸ ಮಾಲೆಯ ಪುಸ್ತಕ ರೂಪ What the Nation Really Needs to Know - The JNU Nationalism Lectures ದಿಂದ ಆರಿಸಿದ ಲೇಖನಗಳ ಕನ್ನಡ ಅನುವಾದ ‘ಜೆಎನ್‌ಯು ಅಂಗಳದಲ್ಲಿ ರಾಷ್ಟ್ರೀಯವಾದದ ಕ್ಲಾಸುಗಳು’ ಶೀರ್ಷಿಕೆಯಡಿ ಪ್ರಕಟವಾಗಿರುವ ಪುಸ್ತಕವಿದು.

About the Author

ಬಿ. ಶ್ರೀಪಾದಭಟ್

ಮೂಲತಃ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನವರು. ವೃತ್ತಿಯಿಂದ ಇಂಜಿನಿಯರ್. ವಿದ್ಯಾರ್ಥಿ ದೆಸೆಯಲ್ಲಿ ಎಂಬತ್ತರ ದಶಕದಲ್ಲಿ ಎಡಪಂಥೀಯ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರು. ಬಳ್ಳಾರಿಯಲ್ಲಿ ಇಂಜಿನಿಯರಿಂಗ್ ವ್ಯಾಸಂಗದ ಸಂದರ್ಭದಲ್ಲಿ ಎಸ್ ಎಫ್ ಐ ಮತ್ತು ದಲಿತ ಸಂಘರ್ಷ ಸಮಿತಿಯ ಜೊತೆಗೂಡಿ ಪ್ರಗತಿಪರ ಚಳುವಳಿಗಳಲ್ಲಿ ಭಾಗವಹಿಸಿದ್ದರು. ಆಗ ನಡೆದ ವಿಜಯ ನಗರ ಉಕ್ಕು ಕಾರ್ಖಾನೆ ( ಈಗ ಜಿಂದಾಲ್)ಯ ಬೇಡಿಕೆಗಾಗಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದರು. ನಂತರ ತೊಂಬತ್ತರ ದಶಕದಲ್ಲಿ ವಿವಿದ ಪ್ರಗತಿಪರ ಸಂಘಟನೆಗಳೊಂದಿಗೆ ತೊಡಗಿಸಿಕೊಂಡಿದ್ದರು. ಆಗ ನಡೆದ ತುಂಗಾ ಉಳಿಸಿ ಹೋರಾಟ, ಜಪಾನ್ ಟೌನ್ ಶಿಪ್ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ್ದರು. ನಂತರ ಪರ್ಯಾಯ ...

READ MORE

Excerpt / E-Books

ಸಾಮ್ರಾಜ್ಯಶಾಹಿ-ವಿರೋಧ ಒಂದೇ ರೀತಿಯ ರಾಷ್ಟ್ರೀಯವಾದವನ್ನು ಹುಟ್ಟು ಹಾಕುವುದಿಲ್ಲ. ಸಾಮ್ರಾಜ್ಯಶಾಹಿ-ವಿರೋಧ ಸಾಮಾನ್ಯ ಅಂಶವಾಗಿದ್ದರೂ, ಗಾಂಧಿ, ಭಗತ್‌ಸಿಂಗ್ ಅಥವಾ ಸಾವರ‍್ಕರ್ ಅವರ ’ರಾಷ್ಟ್ರೀಯವಾದ’ಗಳು ಬೇರೆಯಾಗಿದ್ದವು. ’ರಾಷ್ಟ್ರೀಯವಾದ’ದ ಬಗ್ಗೆ ಬೇರೆನೇ ದೃಷ್ಟಿಕೋನ ಹೊಂದಿದ್ದ ಟಾಗೋರ್ ಅವರಂತಹ ಹಲವು ಟಾಗೋರರು ಹಲವು ಭಾಷೆ, ಪ್ರಾಂತ್ಯ ಮತ್ತು ಜಾತಿಗಳಲ್ಲಿ ಇದ್ದರು ಎಂಬುದು ಜೆಎನ್‌ಯು ಮತ್ತು ಇತರ ವಿ.ವಿ.ಗಳಲ್ಲಿ ನಡೆಯುತ್ತಿರುವ ಸಂಶೋಧನೆಯಿಂದ ತಿಳಿಯುತ್ತದೆ.

ಭಾರತದ ರಾಷ್ಟ್ರೀಯವಾದವು ನಾವು ಅಂದುಕೊಂಡಷ್ಟು ಎಲ್ಲ ಪ್ರದೇಶ, ಜಾತಿ, ಭಾಷೆ, ಬುಡಕಟ್ಟುಗಳನ್ನು ಒಳಗೊಂಡಿರಲಿಲ್ಲ. ವಸಾಹತುಶಾಹಿಯನ್ನು ಈ ಎಲ್ಲ ಪ್ರದೇಶ, ಜಾತಿ, ಭಾಷೆ, ಬುಡಕಟ್ಟುಗಳ ಜನರು ಬೇರೆ ಬೇರೆ ರೀತಿಯಲ್ಲಿ ಪರಿಭಾವಿಸಿದರು. ಆದ್ದರಿಂದ, ವಸಾಹತುಶಾಹಿ-ವಿರೋಧಿ ರಾಷ್ಟ್ರೀಯವಾದ ಸಹ ಅಷ್ಟು ವಿಧವಾಗಿದ್ದವು.

’ಬ್ರಿಟಿಷ್ ಆಡಳಿತ ತೆರೆದ ಅವಕಾಶಗಳು ಇಲ್ಲದಿದ್ದರೆ ನಾನು ಇನ್ನೂ ಬ್ರಾಹ್ಮಣರ ಮನೆಯಲ್ಲಿ ಸೆಗಣಿ ಸಾರಿಸಿಕೊಂಡು ಅಥವಾ ಹಂದಿಯ ಜೀವನ ಮಾಡಿಕೊಂಡು ಇರಬೇಕಿತ್ತು’ ಎಂದು ಜ್ಞಾನಪೀಠ ಪ್ರಶಸ್ತಿ ಕುವೆಂಪು ಅವರು ಒಂದು ಬಾರಿ ಹೇಳಿದ್ದಾರೆ. ಆದರೂ ಅವರ ದೇಶಪ್ರೇಮ ಮತ್ತು ವಿಶ್ವಮಾನವ ದೃಷ್ಟಿಯನ್ನು ಯಾರೂ ಶಂಕಿಸಲಿಲ್ಲ ಅಥವಾ ಅವರನ್ನು ’ದೇಶದ್ರೋಹಿ’ ಎಂದು ದೂಷಿಸಲಿಲ್ಲ.

 ಈಗ ರೈತನ ಉಪಮೆಗೆ ಮರಳೋಣ. ಕೆಂಡದೊಳಗಿನ ಬೆಂಕಿಗೆ ಗಾಳಿ ನೀಡಲು ಆತ ತಿದಿಯನ್ನು ಬಳಸಿಕೊಳ್ಳುತ್ತಾನೆ. ಇದೆ ರೀತಿ, ಬಲಪಂಥೀಯ ಪಕ್ಷಗಳು ವದಂತಿಗಳನ್ನು, ಟೊಳ್ಳು ಘೋಷಣೆಗಳನ್ನು, ಸ್ವ-ಘೋಷಿತ ಪ್ರತಿಪಾದನೆಗಳನ್ನು, ವಿವಾದಾಸ್ಪದ ಸಂಗತಿಗಳನ್ನು ತಿದಿಯಂತೆ ಬಳಸಿಕೊಂಡು, ರಾಷ್ಟ್ರೀಯವಾದ ಕುರಿತಂತೆ ಜನರ ಭಾವನೆಗಳನ್ನು ಕೆರಳಿಸುತ್ತವೆ. ನಿಸ್ಸಂದಿಗ್ಧವಾಗಿ ಈ ಪಕ್ಷಗಳು ರಾಷ್ಟ್ರೀಯವಾದವನ್ನು ಅರ್ಥ ಮಾಡಿಕೊಳ್ಳಲು ಅನುವಾಗುವಂತೆ, ವಿಭಿನ್ನ ಬಗೆಯ ವಾದಿ-ಪ್ರತಿವಾದಿಗಳನ್ನು ಆಮಂತ್ರಿಸುವ ದುಸ್ಸಾಹಸಕ್ಕೆ (ಉದ್ದೇಶಪೂರ್ವಕವಾಗಿಯೇ) ಮುಂದಾಗುವುದಿಲ್ಲ. ಅರ್ಹ ವಾದ ಸಂವಾದಗಳನ್ನು ನಡೆಸಲು ಅವಶ್ಯಕವಾದ ಜ್ಞಾನಶಾಸ್ತ್ರದ ತಿಳಿವಳಿಕೆ ತಮ್ಮ ಬಳಿ ಇಲ್ಲದಿರುವುದರಿಂದ ಮತ್ತು ಈ ರೀತಿಯ ವಾದ-ಪ್ರತಿವಾದ ತಮ್ಮ ಉದ್ದೇಶಗಳಿಗೆ ವಿರುದ್ಧವಾಗಿರುವುದರಿಂದ ಯಾರನ್ನೂ ಕರೆಯದಿರುವುದು ಅವರ ಲೆಕ್ಕಾಚಾರವಾಗಿದೆ. ಈ ಕಾರಣಕ್ಕಾಗಿಯೆ ಆಳವಾದ ಪೂರ್ವಗ್ರಹ ಪೀಡಿತ ರಾಷ್ಟ್ರೀಯವಾದದ ಭಾವನೆಗಳನ್ನು ಕೆರಳಿಸುವುದು ಅವರಿಗೆ ಸುಲಭದ ಸಂಗತಿಯಾಗಿದೆ. … ಪ್ರಭುತ್ವವು ದೇಶಕ್ಕಿಂತಲೂ ಮುಖ್ಯವಾಗಬಾರದು. ಪ್ರಭುತ್ವವು, ಅಂದರೆ ಅದರ ನಿರ್ದಿಷ್ಟ ಅಸ್ತಿತ್ವವಾದ ಸರಕಾರವು, ತನ್ನ ಸಂಕುಚಿತ ಹಿತಾಸಕ್ತಿಗೆ ದೇಶವನ್ನು ಅಧೀನಗೊಳಿಸಬಾರದು ಅಥವಾ ದೇಶದ ಹಿತಾಸಕ್ತಿಗಿಂತ ತನ್ನ ಹಿತಾಸಕ್ತಿ ಆದ್ಯತೆಯದು ಎಂದುಕೊಳ್ಳಬಾರದು. ಈಗಿನ ಜೆಎನ್‌ಯು ಪ್ರಸಂಗದಲ್ಲಿ ಪ್ರಭುತ್ವವು ದೇಶದ ಸಾರಸತ್ವವನ್ನು ಹೊಸಕಿ ಹಾಕಿ, ಅದನ್ನು ಅತಿಕ್ರಮಿಸಿದೆ. ಅದು ದೇಶಕ್ಕಿಂತಲೂ ಮುಖ್ಯವಾಗಲು ಬಯಸಿದೆ. ದೇಶದ ಲೌಕಿಕ ಅಭಿವ್ಯಕ್ತಿಯಾಗಿ ಪ್ರಭುತ್ವ ಪಾತ್ರ ವಹಿಸುತ್ತಿದೆ.

Reviews

ರಾಷ್ಟ್ರೀಯವಾದದ ಅರ್ಥ ಹುಡುಕುತ್ತಾ

ಸರಕಾರವೊಂದು ತನ್ನನ್ನು ’ರಾಷ್ಟ್ರ’ದೊಂದಿಗೆ ಸಮೀಕರಿಸಿಕೊಂಡು, ತನ್ನ ಟೀಕಾಕಾರರನ್ನು, ಭಿನ್ನಮತೀಯರನ್ನು ’ರಾಷ್ಟ್ರ-ವಿರೋಧಿ’ ಎಂದು ಕರೆಯುವುದು ಜರೆಯುವುದು ಜಗತ್ತಿನಲ್ಲಾಗಲಿ ಭಾರತದಲ್ಲಾಗಲಿ ಹೊಸದೇನಲ್ಲ. ಅಂತಹವರ ಮೇಲೆದೇಶದ್ರೋಹ’ದ ಕೇಸು ದಾಖಲಿಸಿ ಬಂಧಿಸುವುದೂ ಹೊಸದಲ್ಲ. ಆದರೆ ಫೆಬ್ರವರಿ 9, 2016ರಂದು ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ಸಂಘದ ಚುನಾಯಿತ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ನನ್ನು ಮತ್ತಿತರ ವಿದ್ಯಾರ್ಥಿಗಳ ಮೇಲೆ ’ದೇಶದ್ರೋಹ’ದ ಕೇಸು ಹಾಕಿ ಬಂಧಿಸಿದ್ದು, ಒಂದು ಹೊಸ ಟ್ರೆಂಡಿನ ಆರಂಭ. ದೇಶವ್ಯಾಪಿಯಾಗಿ ಉನ್ನತ ಶಿಕ್ಷಣದ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ವೆಚ್ಚ ಏರಿಸುವ, ಅದನ್ನು ಬಡ ವಿದ್ಯಾರ್ಥಿಗಳಿಗೆ ನಿಲುಕದಂತೆ ಮಾಡುವ, ಅಲ್ಲಿನ ಕ್ಯಾಂಪಸ್ ಪ್ರಜಾಪ್ರಭುತ್ವವನ್ನು ಕೊನೆಗೊಳಿಸುವ ನೀತಿಗಳ ಜಾರಿ, ಅದನ್ನು ವಿರೋಧಿಸಿದ ಅದಕ್ಕೆ ಪ್ರತಿರೋಧ ಒಡ್ಡಿದ ವಿದ್ಯಾರ್ಥಿ ನಾಯಕರು ಹಾಗೂ ವಿದ್ಯಾರ್ಥಿಗಳ ಮೇಲೆ ಮತ್ತು ಜತೆಗೆ ಎಲ್ಲ ರಾಜಕೀಯ ವಿರೋಧಿಗಳ ಮೇಲೆ ’ದೇಶ-ವಿರೋಧಿ’, ’ದೇಶ-ದ್ರೋಹಿ’ ಎಂದು ವ್ಯಾಪಕವಾಗಿ ಅಪಪ್ರಚಾರ ಮಾಡುವುದು, ಖಾಸಗಿ ಸಶಸ್ತ್ರ ಗ್ಯಾಂಗುಗಳು ಅವರ ಮೇಲೆ ದಾಳಿ-ಹಿಂಸಾಚಾರಗಳನ್ನು ಎಸಗುವುದು, ಈ ಹೊಸ ಟ್ರೆಂಡಿನ ಮುಖ್ಯ ಗುಣಗಳಾಗಿದ್ದವು.

ಜೆಎನ್‌ಯು ಮತ್ತಿತರ ಉನ್ನತ ಶಿಕ್ಷಣಗಳ ಮೇಲೆ ಡಿಸೆಂಬರ್ 2019ರಿಂದ ನಡೆದ ಇನ್ನೊಂದು ಸುತ್ತಿನ ದಾಳಿ ಇನ್ನಷ್ಟು ತೀವ್ರವಾಗಿದ್ದು, ಇದು ತಾರಕಕ್ಕೆ ಮುಟ್ಟಿದೆ.

2016ರಿಂದಲೂ ಇದಕ್ಕೆ ಪ್ರತಿರೋಧವೂ ಬೆಳೆಯುತ್ತಾ ಬಂದಿದೆ ಮತ್ತು ಅದು ಹೆಚ್ಚೆಚ್ಚು ವ್ಯಾಪ್ತಿ ಹಾಗೂ ಆಳಗಳನ್ನು ಪಡೆಯುತ್ತಿದೆ. ಈ ಟ್ರೆಂಡ್ ಒಂದು ಹೊಸ ಸಕಾರಾತ್ಮಕ ಸಂಗತಿಯನ್ನು ಹುಟ್ಟು ಹಾಕಿತ್ತು.  ದೇಶ/ರಾಷ್ಟ್ರವೆಂದರೇನು? ರಾಷ್ಟ್ರವಾದ ಎಂದರೇನು? ರಾಷ್ಟ್ರವಾದದ ಹಲವು ವಿಧಗಳಿವೆಯೆ? ಇದ್ದರೆ ’ಸರಿಯಾದ’ ರಾಷ್ಟ್ರವಾದವನ್ನು ನಿರ್ಧರಿಸುವವರು ಯಾರು? ಒಂದು ಪ್ರದೇಶದ ಅಥವಾ ಒಂದು ಜನವಿಭಾಗದ ಜನರು ತಮ್ಮ ಆಶೋತ್ತರಗಳು ಈಡೇರದಿದ್ದಾಗ ಅಥವಾ ದಮನಕ್ಕೊಳಗಾದಾಗ ಅವರು ಆಳುವವರ ಪ್ರಭುತ್ವದ ಅಧಿಕೃತ ’ರಾಷ್ಟ್ರವಾದ’ವನ್ನು ಪ್ರಶ್ನಿಸುವುದು, ಅದಕ್ಕೆ ಬದಲಿ ಪ್ರಸ್ತಾವಿಸುವುದು ತಪ್ಪೆ? ’ದೇಶದ್ರೋಹ’ವೇ? 2016ರ ಜೆಎನ್‌ಯು ಮೇಲೆ ದಾಳಿಯ ಸಂದರ್ಭದಲ್ಲೇ ಈ ಪ್ರಶ್ನೆಗಳು ಜೆಎನ್‌ಯು ನ ಒಳಗೂ ಹೊರಗೂ ತೀವ್ರ ಚರ್ಚೆಗೆ ಒಳಗಾದವು. ಇದಕ್ಕೆ ಉತ್ತರ ಹುಡುಕುವ ಭಾಗವಾಗಿ ಜೆಎನ್‌ಯು ಅಧ್ಯಾಪಕರ ಸಂಘ ಜೆಎನ್‌ಯು ಆಡಳಿತ ಬ್ಲಾಕಿನ ಅಂಗಳದಲ್ಲಿ ರಾಷ್ಟ್ರವಾದದ ಕುರಿತ ವಿವಿಧ ಜ್ಞಾನಕ್ಷೇತ್ರಗಳ (ಇತಿಹಾಸ, ರಾಜಕೀಯಶಾಸ್ತ್ರ, ಸಮಾಜಶಾಸ್ತ್ರ, ಭಾಷಾಶಾಸ್ತ್ರ ಇತ್ಯಾದಿ) ಹಲವು ಪರಿಣತರಿಂದ ಉಪನ್ಯಾಸ ಮಾಲೆ ಏರ್ಪಡಿಸಿತು.

ಸುಮಾರು ಒಂದು ತಿಂಗಳ ಕಾಲ ನಡೆದ 24 ಉಪನ್ಯಾಸಗಳಲ್ಲಿ ರೊಮಿಲಾ ಥಾಪರ್, ಪ್ರಭಾತ್ ಪಟ್ನಾಯಕ್, ಗೋಪಾಲ ಗುರು ಅವರಂತಹ ಪ್ರಸಿದ್ಧ ಜೆಎನ್‌ಯು ಪ್ರಾಧ್ಯಾಪಕರಲ್ಲದೆ, ಅಚಿನ್ ವನೈಕ್, ಜೈರಸ್ ಬಾನಾಜಿ ಅವರಂತಹ ದೇಶ/ವಿದೇಶಗಳ ಪ್ರಸಿದ್ಧ ವಿ.ವಿಗಳ ಪರಿಣತರೂ ಉಪನ್ಯಾಸ ನೀಡಿದರು. ಇದು 2016ರಲ್ಲೇ ಇಂಗ್ಲಿಷಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು.

ರಾಷ್ಟ್ರವಾದದ ಬಗೆಗಿನ ಗಂಭೀರ ಚರ್ಚೆಯನ್ನು ಕರ್ನಾಟಕದಲ್ಲೂ ಆರಂಭಿಸುವ ಅಗತ್ಯ ಹಿಂದೆಂದಿಗಿಂತಲೂ ಈಗ ಆವಶ್ಯಕವಾಗಿದೆ. ರಾಷ್ಟ್ರವಾದದ ಬಗೆಗಿನ ವಿವಿಧ ಅಭಿಪ್ರಾಯಗಳ, ಹಲವು ಮಗ್ಗುಲುಗಳಿಂದ ನೋಡುವ, ಹಲವು ಆಯಾಮಗಳನ್ನು ಪ್ರಸ್ತುತಪಡಿಸುವ ಈ ಪುಸ್ತಕ, ಕರ್ನಾಟಕದ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಬಹಳ ಉಪಯೋಗಿ ಆಕರ ಗ್ರಂಥವಾಗಬಲ್ಲದು. ರಾಷ್ಟ್ರವಾದದ ಬಗೆಗಿನ ಚರ್ಚೆಯ ಕುರಿತು ಆಸಕ್ತಿ ಇರುವ ಎಲ್ಲರಿಗೂ ಇದೊಂದು ಉತ್ತಮ ಕೈಪಿಡಿ. ಕರ್ನಾಟಕದಲ್ಲಿ ರಾಷ್ಟ್ರವಾದದ ಕುರಿತು ಭಿನ್ನಾಭಿಪ್ರಾಯಗಳನ್ನು ಲಾಠಿ-ಮಚ್ಚುಗಳ ಮತ್ತು ಐಪಿಸಿ ಕಲಮುಗಳ ಭಾಷೆಯಲ್ಲಿ ’ಪರಿಹರಿಸು’ವುದರಿಂದ ಗಂಭೀರ ವಾಗ್ವಾದದತ್ತ ಹೊರಳಿಸುವುದರಲ್ಲಿ ಈ ಪುಸ್ತಕ ನೆರವಾಗಬಲ್ಲದು.

Posted on ಫೆಬ್ರವರಿ 20, 2020 by pusthakapreeethi

Related Books