ಖ್ಯಾತ ಲೇಖಕ, ಮನೋಚಿಕಿತ್ಸಕ ಡಾ. ಬಿ.ವಿ. ಪಟ್ಟಾಭಿರಾಮ್ ಅವರು ಬರೆದ ಪ್ರೇರಣಾತ್ಮಕ ಬರಹಗಳ ಕೃತಿ-ಗೆಲುವು ನಿಮ್ಮದೇ. ತೆಲುಗಿನ ಈ ಕೃತಿಯನ್ನು ಲೇಖಕ ಎಂ.ಎಲ್. ರಾಘವೇಂದ್ರ ರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಯುವತಿ-ಯುವಕರನ್ನು ಉದ್ದೇಶಿಸಿ ಬರೆದ ಕೃತಿ. ಮಗುವಿನ ಎಲ್ಲ ಸಮಸ್ಯೆಗಳನ್ನು ಪಾಲಕರು ಪರಿಹರಿಸುತ್ತಾರೆ. ನೆರವಾಗುತ್ತಾರೆ. ಆದರೆ, ಬೆಳೆದು ದೊಡ್ಡವರಾದ ಮೇಲೆ ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳುವ ಅನಿವಾರ್ಯತೆ ಇರುತ್ತದೆ. ಹಾಗೆ ಪರಿಹರಿಸಿಕೊಂಡ ಪ್ರಯತ್ನದ ಬಗ್ಗೆ ನಿಮಗೆ ಹೆಮ್ಮೆ ಇರುತ್ತದೆ. ದುರ್ಬಲರಾದ ಇತರರಿಗೂ ನೆರವಾಗಲು ಮನಸ್ಸು ಹಾತೊರೆಯುತ್ತದೆ. ತಂದೆ-ತಾಯಿ ಅಥವಾ ಪೊಷಕರು-ಪಾಲಕರು ಮಕ್ಕಳ ಮುಂದೆ ಸಮಸ್ಯೆಯನ್ನು ಹೇಳಿಕೊಳ್ಳುವುದಿಲ್ಲ. ಹೇಳಿಕೊಂಡರೆ ಅವರ ಮನಸ್ಸು ಮುದುಡುತ್ತದೆ ಎಂಬುದು ಒಂದು ಭ್ರಮೆ. ಸಮಸ್ಯೆ ಕುರಿತು ಅವರಿಗೆ ತಿಳಿದರೆ ಮುಂಬರುವ ಸಮಸ್ಯೆಗಳನ್ನು ಅವರು ಎದುರಿಸಲು ಶಕ್ತರಾಗುತ್ತಾರೆ. ವಿಷಯ ಯಾವುದೇ ಇರಲಿ, ಮಕ್ಕಳು ಆ ಬಗ್ಗೆ ನಿರ್ಣಯ ಕೈಗೊಳ್ಳುವಷ್ಟರ ಮಟ್ಟಿಗೆ ಸಫಲರಾಗುವಂತೆ ಮಾಡಬೇಕು. ಇಂತಹ ಸಂಗತಿಗಳ ಕುರಿತು ಚರ್ಚಿಸಿದ ಕೃತಿ ಇದು. ಎದುರಿಸುವವರನ್ನು ಗೆಲುವು ಸಮೀಪಿಸುತ್ದೆ ವಿನಃ ಓಡಿ ಹೋಗುವವರನ್ನಲ್ಲ ಎಂಬ ಪ್ರೇರಣಾತ್ಮಕ ಚಿಂತನೆಗಳು ಈ ಕೃತಿಯ ವೈಶಿಷ್ಟ್ಯ.
©2024 Book Brahma Private Limited.