‘ಡುಂಡಿರಾಮ್ಸ್ ಅಮೆರಿಕ್ಸ್ ಪಂಚ್ ಪಂದಿಗಳು’ ಕೃತಿಯು ಎಚ್. ಡುಂಡಿರಾಜ್ ಹಾಗೂ ಎನ್. ರಾಮನಾಥ್ ಅವರ ಕೃತಿಗಳಾಗಿವೆ. ಡುಂಡಿರಾಜರ ಅರವತ್ತು ಪಂಚಪದಿಗಳು ಅವರ ಅಭಿಜಾತ ವಕ್ರದೃಷ್ಟಿ, ಸಹಜ, ವಿದ್ಯಮಾನಗಳಲ್ಲಿ ಅಡಗಿದ ಹಾಸ್ಯವನ್ನು ಗುರುತಿಸುವ ಅವರ ಸೂಕ್ಷ್ಮ ದೃಷ್ಟಿ ಮತ್ತು ಪ್ರಾಸ ರಚನೆಯಲ್ಲಿ ಅವರಿಗಿದ್ದ ಹಿಡಿತವನ್ನು ತಿಳಿಸುತ್ತದೆ. ರಾಮನಾಥ್ ಅವರ ಲಿಮರಿಕ್ ಗಳು ತಮ್ಮ ವೈವಿಧ್ಯದಿಂದ ಮತ್ತು ಬದುಕಿನ ಕುರಿತಾದ ಒಳನೋಟಗಳಿಂದ ಗಮನ ಸೆಳೆಯುತ್ತದೆ.
ಕೃತಿಗೆ ಬೆನ್ನುಡಿ ಬರೆದಿರುವ ಅಶೋಕ ಹಂದಿಗೋಳ ಅವರು, ಕನ್ನಡದಲ್ಲಿ ಪಂಚಪಂದಿಗಳ ರಚನೆ ಇತ್ತೀಚಿನ ದಶಕಗಳದ್ದು ಅನ್ನಬಹುದೇನೋ. ನೂರಕ್ಕೂ ಹೆಚ್ಚಿನ ಪಂಚಪಂದಿಗಳ ಸಂಗ್ರಹದ ಪುಪ್ಪಮಾಲೆ ಇದಾಗಿದೆ. ಕನ್ನಡ ಚುಟುಕು ಸಾಹಿತ್ಯದಲ್ಲಿ ತಮ್ಮ ಸಾವಿರಾರು ಹನಿಗವನಗಳ ಮೂಲಕ ತಮ್ಮದೇ ಆದ ವಿಶಿಷ್ಟ ಛಾಪನ್ನು, ಮೂಡಿಸಿರುವ ಶ್ರೀಯುತ ಡುಂಡಿರಾಜರು ಹಾಗೂ ಜನಪ್ರಿಯ ಹಾಸ್ಯ ಸಾಹಿತಿ, ಅಂಕಣಕಾರ, ಶಬ್ಧಗಳ ಬಳಕೆಯಲ್ಲಿ ಮಾಂತ್ರಿಕತೆಯನ್ನು ಮೂಡಿಸುವ ಅಣಕು ರಾಮನಾಥ್ ಇವರಿಬ್ಬರ ಪಂಚಪದಿಗಳೇ ಈ ಮಾಲೆಯಲ್ಲಿಯ ಪುಷ್ಪಗಳು. ಇಲ್ಲಿರುವ ಪಂಚಪಂದಿಗಳ ವಿಷಯಗಳ ಹರವು ಬಲು ವಿಸ್ತಾರವಾದುದು; ದಿನನಿತ್ಯದ ಜನಜೀವನ, ನೋವು ನಲಿವು, ರಾಜಕೀಯ, ನೈತಿಕತೆ, ವಿಷಾದ, ಚಟ, ಪ್ರೇಮ, ಲೌಕಿಕ-ಪಾರಮಾರ್ಥಿಕ, ಪ್ರಸ್ತುತ ವಿದ್ಯಮಾನಗಳು, ಹೀಗೆ ಆಡು ಮುಟ್ಟದ ಗಿಡವಿಲ್ಲ ಅನ್ನುವ ಹಾಗೆ. ಹೆಚ್ಚಾಗಿ ತಿಳಿಹಾಸ್ಯ, ವಿಡಂಬನೆ ಎದ್ದುಕಂಡರೂ, ಹಿತನುಡಿಳಗಳು, ಸರಿ ತಪ್ಪುಗಳನ್ನು ಎತ್ತಿ ತೋರಿಸುವ , ನಮ್ಮ ನಡವಳಿಕೆಗಳನ್ನು ತಿದ್ದಿಕೊಳ್ಳುವ ಕಿವಿಮಾತುಗಳೂ ಉಂಟು. ಈ ಈರ್ವರ ಬರವಣಿಗೆಯ ಶೈಲಿಗಳು ಸ್ವಲ್ಪ ಭಿನ್ನವಾಗಿವೆ. ಡುಂಡಿರಾಜರು ಸಂಕ್ಷಿಪ್ತವಾಗಿ, ಸೂಕ್ತವಾದ ಕಡಿಮೆ ಶಬ್ಧಗಳನ್ನು ಬಳಸಿದರೆ ರಾಮನಾಥರ ಶಬ್ಧಭಂಡಾರದ ಶ್ರೀಮಂತಿಕೆಯ ಛಾಯೆ ಆಗಾಗ ಕಣ್ಣಿಗೆ ಬೀಳುತ್ತದೆ. ಸರಳ ಪದಗಳ ಬಳಕೆ ಒಂದೆಡೆಯಾದರೆ ಇನ್ನೊಂದೆಡೆ ನಾಲಿಗೆಗೆ ಕಸರತ್ತು ನೀಡುವ ಪಂಚಪದಿಗಳು ಇಲ್ಲಿವೆ’ ಎಂದಿದ್ದಾರೆ.
©2024 Book Brahma Private Limited.