‘ತಿಮ್ಮಣ್ಣ ತಿಲೋತ್ತಮೆ’ ಲೇಖಕ ಪಿ.ಎಸ್. ರಾಮಾನುಜಂ ರಚಿಸಿರುವ ಲಘು ಹಾಸ್ಯ ಸಂವಾದ. ಈ ಕೃತಿಯ ಬರಹಗಳೆಲ್ಲ ತಿಮ್ಮಣ್ಣ ಹಾಗೂ ತಿಲೋತ್ತಮೆ ಎಂಬ ಕಾಲ್ಪನಿಕ ದಂಪತಿ ನಡುವೆ ನಡೆಯುವ ಸಲ್ಲಾಪ ಎನ್ನಬಹುದಾದ ಸಂವಾದ ರೂಪದಲ್ಲಿವೆ. ಇವು ವಾರಪತ್ರಿಕೆ ಮಂಗಳದಲ್ಲಿ ಸುಮಾರು ಎರಡು ವರ್ಷಗಳ ಕಾಲ ತಿಮ್ಮಣ್ಣ ತಿಲೋತ್ತಮೆ ಸಲ್ಲಾಪ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದವು. ಮುದ್ದಣ್ಣ ಮನೋರಮೆಯರ ಸಂವಾದದಿಂದ ಸ್ಫೂರ್ತಿಗೊಂಡು ಬರೆದ ಈ ಸಂವಾದಗಳು ಒಂದು ರೀತಿಯ ಲಘು, ಹಾಸ್ಯಲೇಪಿತವಾದ, ವಿರಾಮ ವೇಳೆಯಲ್ಲಿ ಮನಸ್ಸನ್ನು ಹಗುರಾಗಿಸಿಕೊಳ್ಳಲು ಓದಬಹುದಾದ ಸರಸ ಸಲ್ಲಾಪಗಳಾಗಿದ್ದು ಇವುಗಳಿಗೆ ಸಾಮಾಜಿಕ ಸಮಸ್ಯೆಗಳು, ಕುತೂಹಲಕರವಾದ ಸುದ್ದಿಗಳು, ದಾರ್ಶನಿಕ ವಿಚಾರಗಳು, ಭಾಷಾ ಸ್ವಾರಸ್ಯಗಳು ಎಲ್ಲವೂ ವಿಷಯಗಳೇ. ಪದಗಳೊಡನೆ ಚೆಲ್ಲಾಟವಾಡುವುದೆಂದರೆ ಈ ದಂಪತಿಗೆ ಬಹಳ ಇಷ್ಟ. ಮುಗ್ಧರಾಗಿ ಏನೂ ತಿಳಿಯದವಳಂತೆ ಪ್ರಶ್ನೆ ಹಾಕುವ ತಿಲೋತ್ತಮೆ ವಾಸ್ತವವಾಗಿ ಪಂಡಿತೆ. ತಿಮ್ಮಣ್ಣ ಹಾಸ್ಯಕವನಗಳನ್ನು ಮಾಡಿ ಅವುಗಳನ್ನು ವಾದದಲ್ಲಿ ಅಸ್ತ್ರಗಳನ್ನಾಗಿ ಬಳಸುವುದರಲ್ಲಿ ಗಟ್ಟಿಗ. ಇವರಿಬ್ಬರ ಸಂವಾದದಲ್ಲಿ ವಾದವಿದೆ, ವಿಡಂಬನೆ ಇದೆ. ಖಂಡನವಿದೆ, ಮಂಡನವಿದೆ, ವಿಮರ್ಶೆ ಇದೆ, ಚಿಕಿತ್ಸಕ ದೃಷ್ಟಿ ಇದೆ. ಇವರದು ಸೃಜನಶೀಲ ಮನಸ್ಸು. ಇವರು ಚರ್ಚಿಸುವ ವಿಷಯಗಳ ವ್ಯಾಪ್ತಿಯೂ ವಿಶಾಲ. ಹೀಗೆ ಚರ್ಚಿಸುವ ರೀತಿ ಮನಸ್ಸನ್ನು ಹಗುರವಾಗಿಸಬಲ್ಲದು.
©2024 Book Brahma Private Limited.