ಲೇಖಕಿ ವಿಜಯಾ ಸುಬ್ಬರಾಜ್ ಅವರ ಅನುವಾದಿತ ಕೃತಿ ʻಕುರುಡುʼ. ಪೋರ್ಚುಗೀಸ್‌ನ ಲೇಖಕ ಜೋಸೆ ಸರಮಾಗೋ ಅವರು ಬರೆದ ʻಬ್ಲೈಂಡ್‌ನೆಸ್ʼ ಕೃತಿಯನ್ನು ಮೊದಲು ಲೇಖಕ ಜಿಯೋವನ್ನಿ ಪೋಂಟಿಯೆರೊ ಆಂಗ್ಲಭಾಷೆಗೆ ತಂದಿದ್ದು, ಬಳಿಕ ಅದನ್ನು ವಿಜಯಾ ಅವರು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಜೋಸೆ ಸರಮಾಗೋ ಅವರು ಒಂದು ಬಿಳಿ ಕುರುಡಿನ ಸೋಂಕು ಹೇಗೆ ಇಡೀ ನಗರದ ಪ್ರಜೆಗಳ ಬದುಕು, ಸಮಾಜ, ಸರಕಾರ, ಆರ್ಥಿಕತೆ ಹೀಗೆ ಎಲ್ಲಾ ರಂಗಗಳಲ್ಲಿ ಅವ್ಯವಸ್ಥೆ ಹಾಗೂ ಅರಾಜಕತೆ ತಾಂಡವವಾಡುತ್ತದೆ ಎಂಬ ಬಗ್ಗೆ ಹೇಳುತ್ತಾರೆ. ಇದರಿಂದಾಗಿ ಸಾಮಾನ್ಯ ಜನರ ಅದರಲ್ಲೂ ಅಸಹಾಯಕರ, ಕುರುಡರ ಮೇಲೆ ನಡೆಯುವ ದೌರ್ಜನ್ಯ, ಸಾವು, ನೋವು, ಅತ್ಯಾಚಾರ, ದಬ್ಬಾಳಿಕೆಗಳನ್ನು ಓದುಗರ ಕರುಳು ಹಿಂಡುವಂತೆ ಚಿತ್ರಿಸಿದ್ದಾರೆ. ಆದರೆ ಈ ಪುಸ್ತಕದ ವಿಶೇಷತೆ ಇಲ್ಲಿ ಬರುವ ಎಲ್ಲಾ ಪಾತ್ರಗಳು ಹಾಗೂ ಪ್ರದೇಶಗಳು ಅನಾಮಧೇಯವಾಗಿರುವುದು. ಇಲ್ಲಿ ಒಟ್ಟು 17 ಅಧ್ಯಾಯಗಳಿವೆ.
ಇನ್ನು, ಕಾದಂಬರಿಯ ಬಗ್ಗೆ ವಿಜಯಾ ಸುಬ್ಬರಾಜ್ ಅವರು, “ಜೋಸೆ ಸರಮಾಗೋ ಹತ್ತಾರು ಕೃತಿಗಳನ್ನು ಬರೆದಿದ್ದರೂ, ಅವುಗಳ ವಸ್ತು ಮೂಲಭೂತವಾಗಿ, ಎಲ್ಲ ಲೇಖಕರಿಗಿಂತ ಭಿನ್ನ. ಬ್ಲೈಂಡ್‌ನೆಸ್ ಕಾದಂಬರಿಯಲ್ಲಿ ಎಂದೂ ಎಲ್ಲಿಯೂ ಕಂಡೂ ಕೇಳಿಯೂ ಅರಿಯದ ಬಿಳಿ ಕುರುಡು ಸೋಂಕಿನ ಕಥೆಯನ್ನು ಕಲ್ಪನೆಯ ಹಿನ್ನೆಲೆಯೊಂದಿಗೆ ಹೆಣೆದು ಅದನ್ನೊಂದು ರೂಪಕವಾಗಿಸಿ, ಅದ್ಭುತವಾದ, ಭೀಭತ್ಸನಾದ, ಭಯಾನಕವಾದ ಸನ್ನಿವೇಶಗಳೊಂದಿಗೆ, ವಿಶಿಷ್ಟವಾಗಿಯೂ ವಿಭಿನ್ನವಾಗಿಯೂ ಕಾಣಿಸುವುದರ ಜೊತೆಗೆ, ಅದನ್ನೊಂದು ದಾರ್ಶನಿಕ ನೆಲೆಗೆ ಕೊಂಡೊಯ್ದಿದ್ದಾನೆ.
ಭೌತಿಕವಾಗಿ ಮಾನಸಿಕ ಯಾತನೆ ಅನುಭವಿಸುವುದು, ಮನುಷ್ಯನಲ್ಲಿನ ಎರಡು ಪ್ರವೃತ್ತಿಗಳಲ್ಲಿ, ಮಾನ ಪ್ರವೃತ್ತಿ ಅಥವಾ ಮಾನವತ್ವ ಹಿಂದೆ ಸರಿದು ರಾಕ್ಷಸ ಪ್ರವೃತ್ತಿಯ ಲಕ್ಷಣವಾದ ಕೌರ್ಯ ವಿಜೃಂಭಿಸುತ್ತದೆ. ಇಲ್ಲಿನ ಒಂದು ವ್ಯಂಗ್ಯವೆನ್ನುವಂತೆ, ನಗರದ ಪ್ರಜೆಗಳೆಲ್ಲ ಸೋಂಕಿಗೆ ಒಳಗಾಗಿ, ಕೇವಲ ಒಬ್ಬ ಮಹಿಳೆ ಮಾತ್ರವೇ ಸೋಂಕಿನಿಂದ ಪಾರಾಗುತ್ತಾಳೆ. ಇಡೀ ಕಾದಂಬರಿಯ ನಿರೂಪಕಿ ಇವಳೇ. ಅಲ್ಲದೆ, ಇಂತಹ ವಿಪತ್ತಿನಿಂದಾಗಿ ಉಂಟಾದ ಪರಿಣಾಮಗಳು, ಪ್ರಜೆಗಳ ಬದುಕುಗಳಲ್ಲಿ ಉಂಟಾದ ಸ್ಥಿತ್ಯಂತರಗಳು, ಕುರುಡು ಸೋಂಕಿಗೆ ಒಳಗಾದವರು, ಸೋಂಕಿತರ ಸಂಪರ್ಕಕ್ಕೆ ಬಂದವರು ಕ್ವಾರಂಟೈನ್‌ನಲ್ಲಿ ಇದ್ದವರು ಅನುಭವಿಸುವ, ನರಕಯಾತನೆ ಇತ್ಯಾದಿಗಳಿಗೆಲ್ಲ ಇವಳೇ ಸಾಕ್ಷಿ ಪ್ರಜ್ಞೆಯಾಗಿಯೂ ನಿಲ್ಲುತ್ತಾಳೆ.
ಇಂತಹ ನಿರಾಶಾದಾಯಕವಾದ ಮತ್ತು ಮನುಷ್ಯನ ಘನತೆ, ಗೌರವಗಳಿಗೆ ಕಾಸಿನ ಬೆಲೆಯೂ ಇಲ್ಲದಂತಾಗಿಸಿದ ಈ ಕಾದಂಬರಿಯ ವಸ್ತು, ಕ್ರಿಯೆ, ದುರಂತ ಸನ್ನಿವೇಶಗಳು - ಇವುಗಳ ನಡುವೆಯೂ ಒಂದು ಭರವಸೆಯ ಆಶಾಕಿರಣ, ಒಂದು ಗುಂಪಿನ ಕುರುಡು ವ್ಯಕ್ತಿಗಳ, ನಡೆ, ನುಡಿ, ಆತ್ಮೀಯತೆ, ಸ್ನೇಹ, ಪರೋಪಕಾರಿ ಮನೋಭಾವ, ಸಂಘಟಿತವಾಗಿ ಬದುಕುವ ಪ್ರಯತ್ನಗಳು, ಡಾಕ್ಟರ್‌ನ ಹೆಂಡತಿ, ಕಪ್ಪು ಕನ್ನಡಕದ ಹುಡುಗಿ, ಇವರ ವರ್ತನೆಯಲ್ಲಿ, ಎದ್ದು ಕಾಣುತ್ತದೆ” ಎಂದು ಹೇಳಿದ್ದಾರೆ.
©2024 Book Brahma Private Limited.