ಭಾರತದ ಸ್ವಾತಂತ್ಯ್ರ ಸಂಗ್ರಾಮಕ್ಕೆ ಮುಸ್ಲಿಂ ಮಹಿಳೆಯರ ಕೊಡುಗೆ ಏನು ಎಂಬುದನ್ನು ಚಿತ್ರಿಸಿರುವ ಕೃತಿ ಇದು. ಸ್ವಾತಂತ್ಯ್ರ ಸಂಗ್ರಾಮದಲ್ಲಿ ಹೋರಾಡಿದವರಲ್ಲಿ ಧರ್ಮ, ಜಾತಿ ಮತ ಪಂಥಗಳನ್ನು ಮೀರಿದವರು ಇದ್ದಾರೆ. ಈ ಹೋರಾಟದಲ್ಲಿ ಮುಸ್ಲಿಂ ಮಹಿಳೆಯರ ಹೋರಾಟದ ಹಾಗೂ ಅವರ ಕೊಡುಗೆ ಕುರಿತು ಈ ಕೃತಿಯು ವಿವರಿಸುತ್ತದೆ. ಅಬಿದಾ ಸಮೀಉದ್ದೀನ್ ಅವರ ಆಂಗ್ಲ ಕೃತಿಯನ್ನು ಷಾಕಿರಾ ಖಾನಂ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
(ಹೊಸತು, ನವೆಂಬರ್ 2013, ಪುಸ್ತಕದ ಪರಿಚಯ)
ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತವನ್ನು ಕಿತ್ತು ಸ್ವತಂತ್ರ ಭಾರತ ನಿರ್ಮಾಣ ಮಾಡುವಲ್ಲಿ ಹಲವರು ಕೈಜೋಡಿಸಿದ್ದಾರೆ. ಜಾತಿ ಮತ ಭೇದವಿಲ್ಲದೆ ಸ್ತ್ರೀಪುರುಷರೆಂಬ ತಾರತಮ್ಯ ಇಲ್ಲದೆ ಎಲ್ಲರೂ ಒಂದಾಗಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಪ್ರಾಣಾರ್ಪಣೆ ಮಾಡಿದ್ದಾರೆ. ಮುಸ್ಲಿಂ ಮಹಿಳೆಯರೇನೂ ಈ ಚಳವಳಿಯಿಂದ ದೂರ ನಿಂತಿಲ್ಲ. ಈ ಸಂದರ್ಭದಲ್ಲಿ ಯಾರಿಗೂ ಕಡಿಮೆಯಿಲ್ಲದಂತೆ ಭಾಗಿಗಳಾಗಿದ್ದಾರೆ. ತಮ್ಮ ಮನೆಯ ಸದಸ್ಯರು ಜೈಲು ಸೇರಬೇಕಾಗಿ ಬಂದಾಗ ಧೈರ್ಯಗೆಡದೆ, ತಾಳ್ಮೆಗೆಡದೆ ತಮ್ಮ ಪಾಲಿಗೆ ಬಂದ ಕೆಲಸವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಅದರಲ್ಲೂ ದೇಶಭಕ್ತಿಗೆ ಹೆಸರಾದ 'ಅಲಿ ಸಹೋದರರೆಂದು ಖ್ಯಾತರಾದ ಇಬ್ಬರು ಹೋರಾಟಗಾರರ ತಾಯಿ ಬೀ ಅಮ್ಮ ಅವರ ಪಾತ್ರ ಎಲ್ಲಕ್ಕಿಂತ ಹಿರಿದು. ಭಾರತದಾದ್ಯಂತ ಸಂಚರಿಸಿ ಭಾಷಣ ಮಾಡಿ ಜನರಲ್ಲಿ ಉತ್ಸಾಹ ತುಂಬುತ್ತಿದ್ದ ಈಕೆ ಅನಿ ಬೆಸೆಂಟರ ಬಂಧನವಾದಾಗ ಬರೆದ ಪತ್ರಗಳಿಂದ ಇವರ ದೇಶಪ್ರೇಮದ ಅರಿವಾಗುತ್ತದೆ. ತಾವೂ ಭಾಗಿಗಳಾಗಿ, ತಮ್ಮ ಮಕ್ಕಳನ್ನೂ ಹೋರಾಟಕ್ಕೆ ಅಣಿಗೊಳಿಸಿ, ತಮ್ಮ ಗಂಡಂದಿರನ್ನೂ ಹೋರಾಡಲು ಪ್ರೋತ್ಸಾಹಿಸುವ ಇನ್ನೂ ಅನೇಕ ಮಹಿಳೆಯರ ಪರಿಚಯ ಈ ಕೃತಿಯಲ್ಲಿ ನಮಗಾಗುತ್ತದೆ. ಹೋರಾಟಗಳಿಗೆ ಹಲವು ಬಗೆಗಳಲ್ಲಿ ಸಹಾಯ ಮಾಡಿದವರಿದ್ದಾರೆ, ರಾಷ್ಟ್ರೀಯ ನಾಯಕರ ನಿಕಟವರ್ತಿಗಳಾಗಿದ್ದು ಸಂದೇಶ ರವಾನೆ ಮಾಡಿದವರಿದ್ದಾರೆ. ಆಯುಧವನ್ನು ಝಳಪಿಸುತ್ತ ಹೋರಾಡಿದ ಕೆಚ್ಚೆದೆಯ ಕ್ರಾಂತಿಕಾರಿಗಳೂ ಇದ್ದಾರೆ.
©2024 Book Brahma Private Limited.