ಲೇಖಕ ಡಾ. ಉದಯ ಕುಮಾರ ಇರ್ವತ್ತೂರು ಅವರ ಕೃತಿ ʻಸರ್ವೋದಯ ಮತ್ತು ಅಭಿವೃದ್ದಿʼ. ಪುಸ್ತಕದ ಬೆನ್ನುಡಿಯಲ್ಲಿ ಎ.ಎಚ್. ರಾಜಾಸಾಬ್ ಅವರು, “ಅಭಿವೃದ್ಧಿ, ಇನ್ನಷ್ಟು ಅಭಿವೃದ್ಧಿ ಮತ್ತು ತ್ವರಿತ ಅಭಿವೃದ್ಧಿ ನಮ್ಮ ಕಿವಿಯ ತಮಟೆಗೆ ಮತ್ತೆ ಮತ್ತೆ ಅಪ್ಪಳಿಸುವ ಶಬ್ದಗಳು. ಆದರೆ ಇದಕ್ಕೆ ತೆರಬೇಕಾದ ಬೆಲೆ ಎಷ್ಟು ಎಂಬುದರ ಬಗ್ಗೆ ನಾವು ಯಾವುದೇ ಗಹನ ಯೋಚನೆ ಮಾಡಿಲ್ಲದಿರುವುದರಿಂದಲೇ ಇರುವ ಈ ಒಂದು ಭೂಮಿಯೂ ಮನುಷ್ಯನ ಹೆಬ್ಬಯಕೆಗಳನ್ನು ಪೂರೈಸುವುದಕ್ಕೆ ಅಶಕ್ತವಾಗಿದೆ. ಅಭಿವೃದ್ಧಿ ಯೋಜನೆಗಳಿಂದ ಹುಟ್ಟಿಕೊಂಡ ನಿರಾಶ್ರಿತರ ಬಹಳ ದೊಡ್ಡ ಸಮಸ್ಯೆ ನಮ್ಮ ದೇಶವನ್ನು ಕಾಡುತ್ತಿದೆ. ಅವರು ನಿಜಕ್ಕೂ ನಿರಾಶ್ರಿತರಲ್ಲ. ಆದರೆ ಅವರನ್ನು ನಿರಾಶ್ರಿತರನ್ನಾಗಿ ಮಾಡಲಾಗಿದೆ. ತುಮಕೂರು ವಿವಿಯು ಹಳ್ಳಿಗಳಲ್ಲಿ ಕೆಲವೊಂದು ಕಾರ್ಯಕ್ರಮಗಳನ್ನು ಮಾಡುವಾಗ ಹಳ್ಳಿಗರು ಪಡುವ ವೇದನೆಯನ್ನು ನಾನು ಪ್ರತ್ಯಕ್ಷವಾಗಿ ನೋಡಿದ್ದೇನೆ. ರೈತರ ಆತ್ಮಹತ್ಯೆ ಮತ್ತು ಭಾರತೀಯ ಕಾರ್ಪೋರೇಟ್ ಉದ್ಯಮಿಗಳ ಜೈಲುವಾಸ ಮತ್ತು ಪಲಾಯನ ಇವುಗಳು ಅಭಿವೃದ್ಧಿ ಸಾಧಿಸಬೇಕೆನ್ನುವ ನಮ್ಮ ದೇಶ ಇದಿರುಗೊಳ್ಳುತ್ತಿರುವ ವಿಷಫಲಗಳು. ಈ ಕುರಿತು ಜನರಲ್ಲಿ ಒಂದು ಎಚ್ಚರವನ್ನು ಮೂಡಿಸಬಹುದೇ..? ಗಾಂಧೀ ಪ್ರಣೀತ ಸರ್ವೋದಯದ ಯೋಚನೆಯನ್ನು ಮತ್ತು ಕನಸನ್ನು ಮತ್ತೊಮ್ಮೆ ಸಮಾಜದ ಮುಂಚೂಣಿಗೆ ತರಬಹುದೇ ಎಂಬ ಉದ್ದೇಶದಿಂದ ಈ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿತ್ತು. ಅನೇಕ ವಿದ್ಯಾರ್ಥಿಗಳು ಈ ಉಪನ್ಯಾಸದಲ್ಲಿ ಬಹಳ ಆಸಕ್ತಿಯಿಂದ ಭಾಗವಹಿಸಿ, ಉಪನ್ಯಾಸವನ್ನು ನೀಡಿದ್ದ ಡಾ. ಉದಯ ಕುಮಾರ್ ಇರ್ವತ್ತೂರು ಅವರೊಂದಿಗೆ ದೀರ್ಘಕಾಲ ಚರ್ಚೆಯಲ್ಲಿ ತೊಡಗಿದ್ದರು” ಎಂದು ಹೇಳಿದ್ದಾರೆ.
©2024 Book Brahma Private Limited.