ಶಿಕ್ಷಣದಲ್ಲಿ ಕನ್ನಡ ಇಂದಿನ ದಿನಗಳಲ್ಲಿ ಚರ್ಚೆಯಲ್ಲಿರುವ ಪ್ರಮುಖ ವಿಷಯ. ಈ ಕೃತಿಯಲ್ಲಿ ಕನ್ನಡವನ್ನು ಶಿಕ್ಷಣದಲ್ಲಿ ತರುವಾಗ ಎದುರಾಗುವ ಸವಾಲುಗಳು ಮತ್ತು ಅದನ್ನು ಎದುರಿಸುವ ಬಗೆಯನ್ನು ಲೇಖಕರು ಚರ್ಚಿಸಿದ್ದಾರೆ. ವಿವಿಧ ಸಂದರ್ಭಗಳಲ್ಲಿ ಅವರು ವಿವಿಧ ಪತ್ರಿಕೆಗಳಿಗಾಗಿ ಬರೆದ ಲೇಖನಗಳನ್ನು ಇಲ್ಲಿ ಒಟ್ಟು ಸೇರಿಸಲಾಗಿದೆ. ಶಿಕ್ಷಣದಲ್ಲಿ ಕನ್ನಡದ ಸ್ಥಾನ, ಸಮಸ್ಯೆ, ಸವಾಲುಗಳನ್ನು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಂವಿಧಾನಾತ್ಮಕ ಹಿನ್ನೆಲೆಯಲ್ಲಿ ವಿಶ್ಲೇಷಿಸಿದ ಬರಹಗಳನ್ನು ಈ ಕೃತಿಯೂ ಒಳಗೊಂಡಿವೆ. ವಿವಿಧ ಸಂದರ್ಭಗಳಲ್ಲಿ ವಿಷಯ ವಿಶ್ಲೇಷಣೆ ಮಾಡಿದ್ದರಿಂದ ಓದುಗರಿಗೆ ಮನವರಿಕೆಯಾಗಬೇಕೆಂಬ ಕಾರಣಕ್ಕಾಗಿ ಕೆಲವು ಸಂಗತಿಗಳು ಪುನರುಕ್ತವಾಗಿವೆ. ಇಲ್ಲಿ ಒಟ್ಟು 10 ಲೇಖನಗಳಿವೆ. ಮೊದಲ ಲೇಖನದಲ್ಲಿ ಕನ್ನಡ, ಸಂಸ್ಕೃತಿ ಮತ್ತು ಸ್ವಾಯತ್ತೆಯ ಕುರಿತಂತೆ ಚರ್ಚಿಸಲಾಗಿದೆ. ಹಾಗೆಯೇ ಕನ್ನಡ ಮಾಧ್ಯಮಕ್ಕೆ ಸವಾಲಾಗಿರುವ ನ್ಯಾಯಾಲಯದ ತೀರ್ಪನ್ನು ಎದುರಿಸುವ ಬಗೆಯನ್ನು ಅವರು ಈ ಲೇಖನದಲ್ಲಿ ಚರ್ಚಿಸಿದ್ದಾರೆ. ಹಾಗೆಯೇ ಇಂಗ್ಲಿನ್ನೂ ತೊಡಗಿಸಿಕೊಂಡು ಕನ್ನಡವನ್ನು ಬೆಳೆಸುವ ಬಗೆಯನ್ನೂ ಅವರು ವಿವರಿಸುತ್ತಾರೆ. ಹಿಂದಿ ಹೇರಿಕೆ ಹೇಗೆ ಕನ್ನಡದ ಮೇಲೆ ತನ್ನ ಪರಿಣಾಮ ಬೀರಿದೆ ಎನ್ನುವುದನ್ನು ಹಿಂದಿ ಹೇರಿಕೆಗೆ ಇದೆ ಒಂದು ಇತಿಹಾಸ ಲೇಖನದಲ್ಲಿ ಚರ್ಚಿಸುತ್ತಾರೆ, ಹಾಗೆಯೇ ಕಾಲೇಜು ಶಿಕ್ಷಣದಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸುವುದರ ಹಿಂದಿನ ತೊಡಕುಗಳನ್ನು ಇನ್ನೊಂದು ಬರಹದಲ್ಲಿ ವಿವರಿಸುತ್ತಾರೆ. ಕನ್ನಡ ಭಾಷೆ ಮತ್ತು ಮಾಧ್ಯಮವನ್ನು ಭಾವುಕ ಕಣ್ಣಿನಿಂದ ನೋಡದೆ, ವಾಸ್ತವದ ನೆಲೆಯಲ್ಲಿ ನೋಡುತ್ತದೆ. ಆದುದರಿಂದಲೇ ಕನ್ನಡ ಮಾಧ್ಯಮದ ಅನುಷ್ಠಾನದ ಕುರಿತಂತೆ ಮಾತನಾಡುವವರಿಗೆ ಈ ಕೃತಿ ಒಂದು ಉತ್ತಮ ಕೈಪಿಡಿಯಾಗಿದೆ.
©2024 Book Brahma Private Limited.