`ಭಾರತದಲ್ಲೊಂದು ಸುಂಕದ ಬೇಲಿ' ಇತಿಹಾಸ ಬರಹದ ಪುಸ್ತಕವಿದು. ಲೇಖಕ ರಾಯ್ ಮ್ಯಾಕ್ಸ್ಹಾಮ್ ರಚಿಸಿದ್ದಾರೆ. ಈ ಪುಸ್ತಕದ ಕನ್ನಡನುವಾದವನ್ನು ಲೇಖಕ ಎಸ್. ನರೇಂದ್ರಕುಮಾರ್ ಮಾಡಿದ್ದಾರೆ. ಸುಮಾರು ಮೂರೂವರೆ ಶತಮಾನಗಳಷ್ಟು ದೀರ್ಘಕಾಲ ಭಾರತದಲ್ಲಿದ್ದ ಬ್ರಿಟಿಷರು ತಾವಿದ್ದಷ್ಟೂ ಕಾಲವೂ ಬಗೆಬಗೆಯಾಗಿ ಇಲ್ಲಿಯ ಸಂಪತ್ತನ್ನು ಕೊಳ್ಳೆ ಹೊಡೆದರು. ಬ್ರಿಟನ್ನಿನ ಅಂದಿನ ವೈಭವವೆಲ್ಲ ಭಾರತೀಯರ ಬೆವರಿನ ಫಲ; ಆ ವಿಲಾಸ-ವೈಭೋಗಗಳಿಗೆ ರಂಗುತುಂಬಿದ್ದು ಬ್ರಿಟಿಷರು ಹೀರಿದ ಭಾರತೀಯರ ರಕ್ತ! ಬ್ರಿಟಿಷರು ಭಾರತೀಯರನ್ನು ದೋಚುವುದಕ್ಕಾಗಿಯೇ ಅನೇಕ ಕಾನೂನುಗಳನ್ನು ಜಾರಿಗೊಳಿಸಿದರು; ವಿವಿಧ ಬಗೆಯ ತೆರಿಗೆಗಳನ್ನು ವಿಧಿಸಿದರು. ದಿನಬಳಕೆಯ ಅಗತ್ಯವಸ್ತುವಾದ ಉಪ್ಪಿನ ಮೇಲೂ ಸುಂಕ ಹೇರಿದರು; ಉಪ್ಪಿನ ಸಾಗಾಟವನ್ನು ನಿರ್ಬಂಧಿಸಿದರು. ಉಪ್ಪಿನ ಸಾಗಾಟದ ಮೇಲೆ ಹದ್ದಿನ ಕಣ್ಣಿಡಲು ನಿರ್ದಾಕ್ಷಿಣ್ಯವಾಗಿ ಕಂದಾಯ ವಸೂಲಿ ಮಾಡಲು; ದಕ್ಷಿಣ ಮತ್ತು ಪಶ್ಚಿಮ ಭಾರತದಿಂದ ಪೂರ್ವೋತ್ತರ ಭಾರತಕ್ಕೆ ಉಪ್ಪಿನ ಮುಕ್ತ ಸಾಗಾಟ ನಡೆಯುವುದನ್ನು ತಪ್ಪಿಸಲು ಮುಳ್ಳುಕಂಟಿಗಳಿಂದ ದಟ್ಟ ಪೊದೆಗಳಿಂದ ಕೂಡಿದ 2500 ಮೈಲು ಉದ್ದದ ಸುಂಕದ ಬೇಲಿಯನ್ನು ರೂಪಿಸಿದರು. ಈ ಬೇಲಿಯ ಇಕ್ಕೆಲಗಳಲ್ಲಿ ಕಾವಲಿಗೆಂದು ಸುಮಾರು ಹನ್ನೆರಡು ಸಾವಿರ ಸಿಬ್ಬಂದಿಯನ್ನು ನಿಯೋಜಿಸಿದ್ದರು. ಇಂಥದ್ದೊಂದು ಬೃಹತ್ತಾದ ಬೇಲಿಯ ಜಾಡುಹಿಡಿದು ಹೊರಟ ಬ್ರಿಟಿಷ್ ಪ್ರಜೆ ರಾಯ್ ಮ್ಯಾಕ್ಸ್ಹ್ಯಾಮ್ ದಾಖಲಿಸಿದ ಅಪೂರ್ವ ಅನುಭವಗಳ ಸಂಗ್ರಹ ರೂಪ ’ಭಾರತದಲ್ಲೊಂದು ಸುಂಕದ ಬೇಲಿ’ ಎಂದು ಈ ಕೃತಿಯ ಕುರಿತು ಇಲ್ಲಿ ವಿವರಿಸಲಾಗಿದೆ.
©2024 Book Brahma Private Limited.