ಎರಡು ವಿಶಿಷ್ಟ ಜಗತ್ತುಗಳ ಸುತ್ತಾ ಹೆಣೆದ ಕಥಾನಕ ಲೇಖಕಿ ಕ್ಷಮಾ ವಿ. ಭಾನುಪ್ರಕಾಶ್ ಅವರ ‘ವಿಜ್ಞಾನ ಲೋಕದ ಜ್ಞಾನಕುಸುಮಗಳು’ ಕೃತಿ. ವಿಜ್ಞಾನ ಹಾಗೂ ಮಹಿಳೆಯರ ಜಗತ್ತನ್ನು ಈ ಕೃತಿಯು ಕಟ್ಟಿಕೊಡುತ್ತದೆ. ವಿಜ್ಞಾನವು ಎಲ್ಲೆಲ್ಲೂ ಅಡಕವಾಗಿದ್ದು, ಅದನ್ನು ಹುಡುಕಿ ತೆಗೆದು ಒಗಟು ಬಿಡಿಸಿ ಅರ್ಥೈಸಿಕೊಂಡು, ಜಗತ್ತಿಗೆ ಸಮೀಕರಿಸಿ ಹೊಸ ಹೊಳಹುಗಳನ್ನು ವಿನೂತನ ಅನ್ವೇಷಣೆಗಳ ಮೂಲಕ ಹೊರಹಾಕುವ ಅಚ್ಚರಿಯ ಕೆಲಸ ಮಾಡುವ ಮಾಂತ್ರಿಕರಿಗೆ ವಿಜ್ಞಾನಿಗಳೆಂದು ಹೆಸರು. ಮತ್ತೊಂದು ಜಗತ್ತು ಮಹಿಳೆಯರದ್ದು. ಈ ಪುಸ್ತಕ ಸಿದ್ಧಪಡಿಸುವ ಹಾದಿಯಲ್ಲಿ ಅನೇಕ ದೇಶಗಳ ಅನೇಕ ಕಾಲಘಟ್ಟಗಳ ಸಾಧಕಿಯರ ಜೀವನದಲ್ಲೊಂದು ಪುಟ್ಟ ಇಣುಕು ಹಾಕುತ್ತಾ ಮುಂದಿನ ಸಾಧಕಿಯ ಬಗ್ಗೆ ತಿಳಿಯುವ ಪ್ರಯತ್ನ ಮಾಡುತ್ತಾ ಸಾಗಿ ಬಂದಿದೆ. ಕಾಲಘಟ್ಟದ ಆಧಾರದ ಮೇಲೆಯೋ, ಅವರು ಸೇವೆ ಸಲ್ಲಿಸಿದ ಶಾಖೆಯ ಆಧಾರದ ಮೇಲೆಯೋ ಈ ಯಾದಿಯಲ್ಲಿ ನಿರ್ದಿಷ್ಟ ಕ್ರಮವನ್ನೇನೂ ಅನುಸರಿಸಿಲ್ಲ.ಇದು ಜಗತ್ತಿನ ಟಾಪ್ ೫೦ ವಿಜ್ಞಾನಿಗಳ ಪಟ್ಟಿ ಎಂಬ ಆಯ್ಕೆಯ ಮಾನದಂಡವನ್ನೂ ಇಲ್ಲಿ ಬಳಸಲಾಗಿಲ್ಲ. ಒಬ್ಬರ ಸಾಧನೆಯನ್ನು ಮತ್ತೊಬ್ಬರಿಗೆ ಹೋಲಿಸಿ ಇವರದ್ದಕ್ಕಿಂತಾ ಇವರದ್ದು ಶ್ರೇಷ್ಠ ಎನ್ನುವುದು ತರವಲ್ಲ. ಇದೇನಿದ್ದರೂ ಈ ಸಾಧಕಿಯರ ಅನುಭವಗಳನ್ನು, ಬದುಕನ್ನು, ಸಾಧನೆಯನ್ನು ಅರಿಯಲು, ಅದರಿಂದ ಸ್ಫೂರ್ತಿ ಪಡೆಯಲು ಕೈಗೊಂಡ ಒಂದು ಪಯಣ. ಇಲ್ಲಿ ಪ್ರತಿಯೊಬ್ಬರ ಸಾಧನೆಯನ್ನೂ, ಅನುಭವವನ್ನೂ ವ್ಯಕ್ತಿನಿಷ್ಠವಾಗಿ, ವಸ್ತುನಿಷ್ಠವಾಗಿ ಗಮನಿಸಿ ಮುಂದೆ ಸಾಗಬೇಕಷ್ಟೇ ಎನ್ನುವ ಕೃತಿ ಇದಾಗಿದೆ.
©2025 Book Brahma Private Limited.