‘ಕಣ ಕಣ ದೇವಕಣ’ ಕಿರು ಪ್ರಪಂಚದೊಳಗೆ ಒಂದು ಇಣುಕು. ಲೇಖಕ ಪಾಲಹಳ್ಳಿ ವಿಶ್ವನಾಥ್ ಅವರ ಕೃತಿ. ಕಳೆದ ಶತಮಾನದ ಮೊದಲ ದಶಕಗಳಲ್ಲಿ ಸಾಪೇಕ್ಷ ಸಿದ್ದಾಂತ ಮತ್ತು ಕ್ವಾಂಟಮ್ ಚಲನ ಸಿದ್ದಾಂತ ಭೌತ ವಿಜ್ಞಾನದ ದಿಕ್ಕನ್ನೇ ಬದಲಾಯಿಸಿ ಅನೇಕ ಹೊಸ ಪರಿಕಲ್ಪನೆಗಳಿಗೆ ಜನ್ಮ ಕೊಟ್ಟವು. ಅವುಗಳ ಉತ್ತರಾಧಿಕಾರಿ ಕ್ಷೇತ್ರವೇ ಕಣವಿಜ್ಞಾನ! ಇದುವರೆವಿಗೆ ಹೆಚ್ಚು ಜನ ಕಣ್ಣುಹರಿಸದಿದ್ದ ಅಧ್ಯಯನವಾಗಿದ್ದು, ಮಹಾ ಕಣ ವಿಜ್ಞಾನಿ ಲಿಯಾನ್ ಲೆಡೆರ್ಮನ್‌ರವರ ತುಂಟತನದಿಂದ ಈ ಕ್ಷೇತ್ರಕ್ಕೆ ಶ್ರೀಸಾಮಾನ್ಯರ ಕೃಪಾಕಟಾಕ್ಷ ದೊರೆಕಿದೆಯೆಂದು ಹೇಳಬಹುದು! ಲೆಡರ್ಮನ್ ತಮ್ಮ ಪುಸ್ತಕಕ್ಕೆ `ದೇವಕಣ'ದ ಶೀರ್ಷಿಕೆಯಿತ್ತು ಈ ಕ್ಷೇತ್ರಕ್ಕೆ ಹಿಂದಿರದಿದ್ದ ಪ್ರಚಾರವನ್ನು ದೊರಕಿಸಿಕೊಟ್ಟಿದ್ದಾರೆ. ಹಲವಾರು ಜನ ಈ ಪದದ ಪೂರ್ವಾರ್ಧವನ್ನೇ ತೆಗೆದುಕೊಂಡು ವಿವಿಧ ವ್ಯಾಖ್ಯಾನಗಳನ್ನು ಮಾಡಿಕೊಂಡರೂ, ಇಲ್ಲಿ ಪ್ರಸ್ತಾವಿಸಿರುವ ಪ್ರತಿಯೊಂದು ಕಣವೂ ನಮ್ಮ ಜೀವಕ್ಕೆ ನಮ್ಮ ವಿಶ್ವಕ್ಕೆ ಅತಿ ಅಗತ್ಯ. ಬೇರೆ ಕಣಗಳ ವಿಷಯ ತಿಳಿದುಕೊಳ್ಳದೆ 'ದೇವಕಣ'ದ ಸ್ಕೂಲ ಪರಿಚಯವೂ ಆಗಲಾರದು. ಹಾಗೂ ಈ ಪುಸ್ತಕದಲ್ಲಿ ಕಣವಿಜ್ಞಾನದ ಮೇಲಿನ ಹೊದಿಕೆ ಮಾತ್ರ ತೆಗೆದಿರುವ ಪ್ರಯತ್ನ ನಡೆದಿದೆ; ಇಲ್ಲಿ ಪ್ರಸ್ತಾಪಿಸಿರುವ ಪ್ರತಿ ಉಪ ಅಧ್ಯಾಯವೂ ತನ್ನದೇ ಅಗಾಧ ವ್ಯಾಪ್ತಿಯನ್ನು ಹೊಂದಿದೆ. ಈ ಕ್ಷೇತ್ರದಲ್ಲಿನ ವಿಜ್ಞಾನಿಗಳ ಪರಿಚಯ, ಅಲ್ಪ ಸ್ವಲ್ಪವಾದರೂ, ಈ ಅಧ್ಯಯನದ ಸ್ವಾರಸ್ಯವನ್ನು ತೋರಿಸಿಕೊಡಬಹುದು. ಹಿಂದಿನಿಂದಲೂ ಭೌತ ಮತ್ತು ಖಗೋಳ ವಿಜ್ಞಾನದ ಬಗ್ಗೆ ಆಗ ಈಗ ಸ್ವಲ್ಪ ಬರೆದಿಟ್ಟುಕೊಳ್ಳುತ್ತಿದ್ದು ಇಲ್ಲಿಯ 'ಸಾಮಾನ್ಯ ಕಣಗಳು' ಅಧ್ಯಾಯದಲ್ಲಿನ ಕೆಲವು ವಿಷಯಗಳು ಸ್ವಲ್ಪ ಬೇರೆ ರೂಪದಲ್ಲಿ ಕನ್ನಡ ಪ್ರಭದಲ್ಲಿ ತುಣುಕು ತುಣುಕಾಗಿ 4-5 ವರ್ಷಗಳ ಹಿಂದೆ ಪ್ರಕಟವಾಗಿದ್ದವು.
©2024 Book Brahma Private Limited.