ಮನುಕುಲದ ರಕ್ಷಣೆಗೆ ಮಹತ್ವದ ದಿನಗಳು

Author : ವಿವಿಧ ಲೇಖಕರು

Pages 287

₹ 500.00




Year of Publication: 2018
Published by: ಪರಿಸರ ನಿಸರ್ಗ ಸಂರಕ್ಷಣಾ ಸಂಸ್ಥೆ

Synopsys

ಮನುಕುಲದ ರಕ್ಷಣೆಗೆ ಮಹತ್ವದ ದಿನಗಳು ನಾಗೇಶ ಹೆಗಡೆ ಹಾಗೂ ಈಶ್ವರ ಪ್ರಸಾದ್‌ ಅವರ ಕೃತಿಯಾಗಿದೆ. ಭೂಮಿ ಬಿಸಿಯಾಗುತ್ತಿದೆ. ಋತುಮಾನಗಳು ಏರುಪೇರಾಗಿ, ಚಳಿ, ಮಳೆ, ಬೇಸಿಗೆ ಕಾಲಗಳು ತೀರ್ವವಾಗುತ್ತಿವೆ. ಇದರಿಂದಾಗಿ ಭೂಮಿಯ ಜೀವಮಂಡಲ ದೊಡ್ಡ ಸಂಕಷ್ಟದತ್ತ ಹೊರಳುತ್ತಿದೆ. ಇದರ ದುಷ್ಪರಿಣಾಮ ಎಲ್ಲರ ಮೇಲೂ ಬೀರಲಿದ್ದು, ಯಾರೊಬ್ಬರೂ ಈ ಸಂಕಷ್ಟದಿಂದ ಹೊರಗುಳಿಯಲು ಸಾಧ್ಯವಿಲ್ಲ. ಪಳೆಯುಳಿಕೆ ಶಕ್ತಿ ಆಧಾರಿತ ನಮ್ಮ ಅಭಿವೃದ್ಧಿಯ ಮಾದರಿಗಳು ಹಾಗೂ ಅಂದಾ-ಮಂದಿ ಜೀವನ ವಿಧಾನಗಳೇ ಇದಕ್ಕೆ ಮುಖ್ಯ ಕಾರಣ ಎಂದು ವಿಜ್ಞಾನಿಗಳು ಹೇಳಿ ಎಚ್ಚರಿಸುತ್ತಿದ್ದಾರೆ. ಬುದ್ಧಿವಂತ ಮಾನವರಾದ ನಾವು, ನಮ್ಮನ್ನು ಬಚಾವು ಮಾಡಿಕೊಳ್ಳುವುದರ ಜೊತೆಗೆ ಭೂಮಿಯ ಇತರ ಜೀವಿಗಳನ್ನೂ ರಕ್ಷಿಸಬೇಕು. ಈಗಾಗಲೇ ಅನೇಕ ದೇಶಗಳ ಮುತ್ತಟ್ಟೆಗಳು, ಅಲ್ಲಿನ ಪ್ರಜ್ಞಾವಂತ ನಾಗರಿಕರಿಗೆ ಹಾಗೂ ಸರಕಾರಗಳಿಗೆ ಪರಿಸರ ಸಂವರ್ಧನೆಯ ಕಾರ್ಯಕ್ರಮಗಳಿಗೆ ಪ್ರೇರಣೆ ನೀಡುತ್ತಿದ್ದಾರೆ. ಆದರೆ ದೂರದ ಯಾರೋ ಎಲ್ಲವನ್ನೂ ಸರಿಪಡಿಸುತ್ತಾರೆ ಎಂದು ನಾವು ಇಲ್ಲಿ ಕೈಕಟ್ಟಿ ಕೂರುವಂತಿಲ್ಲ. ಭೂಮಿಯ ಪ್ರತಿಯೊಬ್ಬ ಪ್ರಜೆಯೂ ತನ್ನ ಅಂದಾ-ದುಂದಿ ಜೀವನ ವಿಧಾನದಲ್ಲಿ ಬದಲಾವಣೆ ಮಾಡಿಕೊಂಡರೆ ಮಾತ್ರ ಮುಂದಿನ ಪೀಳಿಗೆ ಬದುಕುಳಿಯಲು ಸಾಧ್ಯ. ಭೂಮಿಗೆ ಬಂದಿರುವ ಈ ಆಪತ್ತುಗಳನ್ನು ಗಂಭೀರವಾಗಿ ಪರಿಗಣಿಸಬೇಕೆಂಬ ಉದ್ದೇಶದಿಂದ ಜಾಗತಿಕ ಮಟ್ಟದಲ್ಲಿ ಪರಿಸರ ಸಂವರ್ಧನೆಗೆ ನೀತಿ ನಿಯಮಗಳನ್ನು ರೂಪಿಸುತ್ತಿರುವ ವಿಶ್ವಸಂಸ್ಥೆಯು, ವರ್ಷದುದ್ದಕ್ಕೂ ನಾನಾ ಪರಿಸರ ದಿನಗಳಿಗೆ ಪ್ರಾಶಸ್ಯ ನೀಡಿ, ಅರ್ಥಪೂರ್ಣ ಆಚರಣೆಗೆ ಕರೆ ನೀಡಿದೆ. ಭಾರತ ಸರಕಾರವೂ ಈ ದಿನಗಳಿಗೆ ಮಾನ್ಯತೆ ನೀಡಿ, ತಾನೂ ಒಂದೆರಡು ಹೆಚ್ಚುವರಿ ವಿಶೇಷ ದಿನಗಳನ್ನು ಗುರುತಿಸಿದೆ. ಆದರೆ ನಮ್ಮ ಕ್ಯಾಲೆಂಡರ್-ಪಂಚಾಂಗಗಳಲ್ಲಿ, ಪಠ್ಯ ಸಿಲೆಬಸ್‌ಗಳಲ್ಲಿ ಇವುಗಳ ಪ್ರಸ್ತಾಪ ಇಲ್ಲವಾದ ಕಾರಣ ಈ ಜಾಗತಿಕ ಪರಿಸರ ದಿನಗಳು ನಮ್ಮ ಪರಿಚಯಕ್ಕೆ ಬಂದಿಲ್ಲ. ಭೂಮಿಯ ಜೀವಪರಂಪರೆ ನಿರಂತರ ಸಾಗಬೇಕು ಹಾಗೂ ಮನುಕುಲದ ನಾಳೆಗಳು ಸುಸ್ಥಿರವಾಗಲೆಂಬ ಸದುದ್ದೇಶದಿಂದ 'ಪರಿಸರ ಸಂಸ್ಥೆ'ಯು ವಿಶ್ವಸಂಸ್ಥೆ ಹಾಗೂ ಭಾರತ ಸರ್ಕಾರಗಳು, ನಿಗದಿಪಡಿಸಿರುವ ವಿಶ್ವ ಪರಿಸರ ದಿನಗಳ ಕುರಿತು ಕನ್ನಡಿಗರಿಗೆ ಅರಿವು ಮೂಡಿಸಲು 'ಮನುಕುಲ ರಕ್ಷಣೆಗೆ ಮಹತ್ವದ ದಿನಗಳು' ಎಂಬ ಸಚಿತ್ರ ಗ್ರಂಥ ರಚಿಸಿ, 'ಪರಿಸರ ಕ್ಯಾಲೆಂಡರ್' ರೂಪಿಸಿ, ಎರಡು ಪರಿಸರ ಸಾಕ್ಷ್ಯಚಿತ್ರಗಳನ್ನು ಕನ್ನಡಕ್ಕೆ ಅನುವಾದಿಸಿ, ವಿಧಾನ ಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರುಗಳಿಗೆ ವಿಧಾನಸೌಧದಲ್ಲಿ ಅರಿವು ಮೂಡಿಸುವ ಮೂಲಕ ಲೋಕಾರ್ಪಣೆ ಮಾಡಿದೆ. ನಮ್ಮೆಲ್ಲರ ಭವಿಷ್ಯದ ದೃಷ್ಟಿಯಿಂದ, ಭೂಪರಿಸರದ ದೃಷ್ಟಿಯಿಂದ ಮಹತ್ವದ್ದೆನಿಸಿದ ದಿನಗಳು ಯಾವವು, ಅವುಗಳ ಪ್ರಾಮುಖ್ಯ ಏನು ಎಂಬುದರ ವಿವರಣೆ ಇರುವ ಅಪರೂಪದ ಪರಿಸರ ಗ್ರಂಥ ಇದು. ಈ ಪ್ರಜ್ಞಾಮೂಲಗಳನ್ನು ಬಳಸಿ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳ ಬೋಧಕರಿಗೆ 'ಪರಿಸರ ಮನನ' ಕಾರ್ಯಾಗಾರಗಳ ಮೂಲಕ ಸಮಗ್ರ ಪರಿಸರ ಅಧ್ಯಯನಕ್ಕೆ ಪೂರಕವಾಗಿ ಅರಿವು ಮೂಡಿಸಿ, ಇಕೋ-ಕ್ಲಬ್‌ಗಳನ್ನು ಪ್ರಾರಂಭಿಸಿ, ಪರಿಸರ ಸಂವರ್ಧನೆಗೆ ಸಮಾಜದ ಎಲ್ಲ ಸರದ ಜನರ ಪಾಲುಗಾರಿಕೆ ಪಡೆಯುವ ಯತ್ನದಲ್ಲಿದ್ದೇವೆ ನಾಗೇಶ ಹೆಗಡೆ, ಈಶ್ವರ ಪ್ರಸಾದ್‌ ಅವರು ಪುಸ್ತಕದ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ.

About the Author

ವಿವಿಧ ಲೇಖಕರು

. ...

READ MORE

Reviews

(ಹೊಸತು, ಜುಲೈ, 2015, ಪುಸ್ತಕದ ಪರಿಚಯ)

ಮಾನವ ಇಂದು ಜೀವಿಸುತ್ತಿರುವ ಭೂ ಪರಿಸರ ಅತ್ಯಂತ ಕಲುಷಿತವಾಗಿದೆ. ನೆಲ-ಜಲ-ವಾಯು ಮಾಲಿನ್ಯ ಮಿತಿ ಮೀರಿದೆ. ಇದು ಸ್ವಯಂಕೃತಾಪರಾಧವಾದರೂ ಆತ ಇನ್ನೂ ಎಚ್ಚೆತ್ತುಕೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ, ಸುಖ ಸೌಕರ್ಯಕ್ಕಾಗಿ ಪರಿಸರವನ್ನು ಹಾಳುಗೆಡವುದನ್ನು ಆಕಾಲವೃಷ್ಟಿ-ಅತಿವೃಷ್ಟಿ-ಅನಾವೃಷ್ಟಿಗಳಿಂದಾಗಿ ಬಿಟ್ಟಿಲ್ಲ. ಎಲ್ಲವೂ ತಾಳ ತಪ್ಪುತ್ತಿದ್ದು ಮುಂದೆ ಮನುಕುಲದ ವಿನಾಶ ಕಾದಿದೆಯೆಂದು ಜಗತ್ತಿನಾದ್ಯಂತ ಜನರನ್ನು ಜಾಗೃತಗೊಳಿಸುವ ಪ್ರಯತ್ನ ಸಾಗಿದೆ. ವಿಶ್ವಸಂಸ್ಥೆ ಈ ದಿಸೆಯಲ್ಲಿ ಹಲವು ದಿನಾಚರಣೆಗಳನ್ನು ರೂಪಿಸಿ ಪರಿಸರ ರಕ್ಷಣೆಗೆ ಮುಂದಾಗಿದೆ. ಹಲವಾರು ದಿನಾಂಕ ಗಳನ್ನು ನಿಗದಿಪಡಿಸಿ ಅಂದು ನಾವು ಮಾಡಬೇಕಾದ ಕೆಲಸಗಳ ಪಟ್ಟಿಯನ್ನೇ ನೀಡಿ ಅದರಂತೆ ನಡೆಯಲು ಕರೆನೀಡಿದೆ. ಪರಿಸರಕ್ಕೆ ಸಂಬಂಧಿಸಿದಂತೆ ಅವು ಯಾವುದೆಂದು ಈ ಕೃತಿಯಲ್ಲಿ ವಿಶದವಾಗಿ ತಿಳಿಸ ಲಾಗಿದೆ. ಅಂತಹ ಮಹತ್ವದ ದಿನಗಳಲ್ಲಿ ನಾವೇನು ಮಾಡಬಹುದು ಮತ್ತು ಯಾಕಾಗಿ ಅವನ್ನು ಮಾಡಬೇಕು ಎಂದು ತಿಳಿಸಿ. ಅನೇಕ ವಿಚಾರಗಳಲ್ಲಿ ನಮ್ಮನ್ನು ಎಚ್ಚರಿಸುವ, ನಾವು ಓದಲೇಬೇಕಾದ ಕೃತಿಯಿದು. ಇಂಥ ದಿನಾಚರಣೆಗಳ ಬಗ್ಗೆ ತಿಳಿದುಕೊಂಡು ಪರಿಸರ ಸಂರಕ್ಷಿಸುವಲ್ಲಿ ನಾವೂ ಮುಂದಾಗುವಂತೆ ಪ್ರೇರೇಪಣೆ ನೀಡುವಲ್ಲಿ ಪುಸ್ತಕ ಯಶಸ್ವಿಯಾಗಿದೆ. ಅಂತಹ ಅಳಿಲು ಸೇವೆಗೆ ಮುಂದಾಗೋಣ.

Related Books