ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ.
ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕ (1962) ರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಕಲಬುರ್ಗಿಯವರು, ವಿಶ್ವವಿದ್ಯಾಲಯದ ‘ಕನ್ನಡ ಅಧ್ಯಯನ ಪೀಠ’ದಲ್ಲಿ ಅಧ್ಯಾಪಕ (1966) ರಾಗಿ ನೇಮಕಗೊಂಡರು. ಮೂವತ್ತೊಂಬತ್ತು ವರ್ಷಗಳು ಶಿಕ್ಷಕ ವೃತ್ತಿಯಲ್ಲಿ ತೊಡಗಿಕೊಂಡಿದ್ದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ (1998-2001) ಗಳಾಗಿದ್ದರು. ಕರ್ನಾಟಕ ಸರ್ಕಾರವು ಪ್ರಕಟಿಸಿದ ಹದಿನೈದು ಸಂಪುಟಗಳ ‘ವಚನಸಾಹಿತ್ಯ ಸಂಪುಟ’ ಮಾಲೆಗೆ ಅವರು ಪ್ರಧಾನ ಸಂಪಾದಕರಾಗಿದ್ದರು. ಹಾಗೆಯೇ ‘ಸಮಗ್ರ ಕೀರ್ತನ ಸಂಪುಟ’ಗಳ ಸಂಪಾದಕ ಮಂಡಳಿಯ ಸದಸ್ಯರೂ ಆಗಿದ್ದರು.
ಎಪ್ಪತ್ತೈದಕ್ಕೂ ಹೆಚ್ಚು ಪುಸ್ತಕಗಳನ್ನೂ ನಾನೂರಕ್ಕೂ ಹೆಚ್ಚು ಸಂಶೋಧನ ಲೇಖನಗಳನ್ನೂ ಪ್ರಕಟಿಸಿದ್ದಾರೆ. ‘ಕವಿರಾಜಮಾರ್ಗ ಪರಿಸರದ ಕನ್ನಡಸಾಹಿತ್ಯ’, ‘ಮಾರ್ಗ’, ‘ಐತಿಹಾಸಿಕ’, ‘ಶಾಸನ ವ್ಯಾಸಂಗ’, ‘ಶಾಸನ ಸಂಪದ’, ‘ಧಾರವಾಡ ಜಿಲ್ಲೆಯ ಶಾಸನಸೂಚಿ’, ಕಲಬುರ್ಗಿ ಅವರು 30ಕ್ಕೂ ಹೆಚ್ಚು ಪ್ರಾಚೀನ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ‘ಶಿವಯೋಗ ಪ್ರದೀಪಿಕಾ’, ‘ಕೊಂಡಗುಳಿ ಕೇಶೀರಾಜನ ಕೃತಿಗಳು’, ‘ಬಸವಣ್ಣನ ಟೀಕಿನ ವಚನಗಳು’, ‘ಸಿರುಮನಾಯಕನ ಸಾಂಗತ್ಯ, ‘ಜಾನಪದ ಮಾರ್ಗ’ ಮತ್ತು ‘ಉತ್ತರ ಕರ್ನಾಟಕದ ಜನಪದ ಸಾಹಿತ್ಯ’.
ಕಲಬುರ್ಗಿ ಅವರ ‘ನೀರು ನೀರಡಿಸಿತ್ತು’, ‘ಕೆಟ್ಟಿತ್ತು ಕಲ್ಯಾಣ’ ಇವರ ಹಲವು ಸೃಜನಶೀಲ ಬರಹಗಳ ಸಾಲಿಗೆ ಸೇರುತ್ತವೆ.
ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರಪ್ರಶಸ್ತಿ, ಪಂಪ ಪ್ರಶಸ್ತಿ, ಚಿದಾನಂದ ಪ್ರಶಸ್ತಿ ಮತ್ತು ವಿಶ್ವಮಾನವ ಪ್ರಶಸ್ತಿ, ‘ಮಾರ್ಗ-4’ ಎಂಬ ಕೃತಿಯು ಕೇಂದ್ರಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಅವರ ಆರು ಪುಸ್ತಕಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪಡೆದಿದ್ದವು. ಕಲಬುರ್ಗಿ-60 ಮತ್ತು ಮಹಾಮಾರ್ಗಗಳು ಈ ವಿದ್ವಾಂಸರಿಗೆ ಸಲ್ಲಿಸಲಾಗಿರುವ ಅಭಿನಂದನ ಗ್ರಂಥಗಳಲ್ಲಿ ಮುಖ್ಯವಾದವು
ಕಲಬುರ್ಗಿ ಅವರು 2015 ರ ಆಗಸ್ಟ್ 30ರಂದು ಹತ್ಯೆಗೀಡಾದರು.
ಕೇಂದ್ರ ಸಾಹಿತ್ಯ ಅಕಾಡೆಮಿ-2006
ಕಲಬುರ್ಗಿ ಅವರ ಸಾಕ್ಷಯಚಿತ್ರ