ವಿದ್ಯಾರ್ಥಿಗಳ ಜತೆ ಜೆ. ಕೃಷ್ಣಮೂರ್ತಿಯವರು 1954ರ ಜನವರಿ ತಿಂಗಳಿನಲ್ಲಿ ವಾರಣಾಸಿಯಲ್ಲಿ ನಡೆಸಿದ ಸಂವಾದಗಳ ಹಾಗೂ ನೀಡಿದ ಉಪನ್ಯಾಸಗಳ ಅಧಿಕೃತ ವರದಿಗಳನ್ನು ಈ ಕೃತಿಯು ಒಳಗೊಂಡಿದೆ. ಗಂಗಾ ಹಾಗೂ ವರುಣಾ ನದಿಗಳ ಸಂಗಮದಲ್ಲಿ ಜೆಕೆ ಸ್ಥಾಪಿಸಿದ ರಾಜ್‌ಘಾಟ್ ಸ್ಕೂಲ್‌ನಲ್ಲಿ ನೀಡಿದ ಹದಿನೈದು ಉಪನ್ಯಾಸಗಳು ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ನೀಡಿದ ಮೂರು ಉಪನ್ಯಾಸಗಳು ಇದರಲ್ಲಿ ಅಡಕಗೊಂಡಿವೆ. ಪಕ್ಷ 1930ರಿಂದ 1980ರ ತನಕ ಭಾರತಕ್ಕೆ ನೀಡಿದ ವಾರ್ಷಿಕ ಭೇಟಿಗಳ ಸಂದರ್ಭದಲ್ಲಿ ಕೃಷ್ಣಮೂರ್ತಿಯವರು ಕೆಲವು ವಾರಗಳ ಕಾಲ ವಸತಿ ಶಾಲೆಯಲ್ಲಿದ್ದು ಕೊಂಡು ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು, ಪಾಲಕರನ್ನು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ತಪ್ಪದೆ ಉಪನ್ಯಾಸ ನೀಡುತ್ತಿದ್ದರು. ಅವರು ಉಪನ್ಯಾಸಗಳನ್ನು ನೀಡಿದರು, ಪ್ರಶ್ನೆಗಳಿಗೆ ಉತ್ತರಕೊಟ್ಟರು, ಶೋತೃಗಳನ್ನು ಮುಕ್ತ ಸಂವಾದದಲ್ಲಿ ತೊಡಗಿಸಿದರು ಮತ್ತು ಜನರನ್ನು ವೈಯಕ್ತಿಕವಾಗಿ ಹಾಗೂ ಸಣ್ಣ ಗುಂಪುಗಳಲ್ಲಿ ಭೇಟಿಯಾದರು. ಈ ಎಲ್ಲ ಭೇಟಿಗಳಲ್ಲಿ ಶಿಕ್ಷಣವನ್ನು ಜೀವನದಿಂದ ಬೇರ್ಪಡಿಸಬಾರದು ಮತ್ತು ಹಿರಿಯ ಕಿರಿಯರೆನ್ನದೆ ಎಲ್ಲರೂ ಬಾಹ್ಯ ಪ್ರಪಂಚ ಹಾಗೂ ಮಾನವನ ಪ್ರಜ್ಞೆಯ ಅಂತರಂಗವನ್ನು ಅರಿಯಲು ಅದು ನೆರವಾಗಬೇಕು ಎಂಬುದನ್ನು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಲಾಗಿದೆ.
©2024 Book Brahma Private Limited.