ಡಾ. ಪ್ರಕಾಶ್ ನನ್ನ ಅಪರೂಪದ ಶಿಷ್ಯ, ಶಿಸ್ತುಬದ್ಧ ಓದು, ಬಹುಮುಖ ಆಲೋಚನೆ, ಕಾಳಜಿಪೂರ್ಣ ಮಾತು-ಚರ್ಚೆ, ಮಿಗಿಲಾಗಿ ಎಲ್ಲರೊಡನೆ ಭಿಡೆಯಿಲ್ಲದೆ ಬೆರೆಯುವ ಸಹಜ-ಸರಳ 'ಮನುಷ್ಯಗುಣ'ಗಳು ಯಾವುದೇ ಈತನ ಎಡೆಬಿಡದ ಸಂಗಾತಿಗಳು. ವಿಶ್ಲೇಷಣೆ, ವಿಮರ್ಶೆ ಮತ್ತು ಸಂಶೋಧನೆಗಳೆಲ್ಲದರ ತಳಹದಿ ಮಾನವೀಯ ವೈಚಾರಿಕತೆ, ಸಮಾನತಾ ಸಮಾಜದ ತುಡಿತ, ಜೊತೆಗೆ ಜಗವನೆಲ್ಲವ ಒಂದಾಗಿ ಕಾಣುವ ವಿಶ್ವಾತ್ಮಕ ಕಾಳಜಿಗಳು ಎಂಬ ಖಚಿತ ನಂಬುಗೆ ಈತನದು. ಬಹಳ ಓದಿಕೊಂಡಿದ್ದ ಪ್ರಕಾಶ್ ಸಭೆಗಳಲ್ಲಿ ಚೆನ್ನಾಗಿ ಮಾತಾಡುವುದು ಕೇಳಿದ್ದೆ. ಅವರು ಓದಿಕೊಂಡಿದ್ದಕ್ಕೆ ಹೋಲಿಸಿದರೆ ಬರೆದಿದ್ದು ಕಡಿಮೆ. ಬಹುಶಃ ತಮ್ಮ ಪಾಠದ ಮೂಲಕ ವಿದ್ಯಾರ್ಥಿಗಳ ಮನಸ್ಸನ್ನು ರೂಪಿಸುವ ಮಹತ್ವದ ಕೆಲಸವನ್ನು ಅವರು ಮಾಡಿರಬೇಕು. ಅವರ ಮೊಟ್ಟಮೊದಲ ಭಾಷಣವನ್ನು ನಾನು ಗಂಗಾವತಿಯಲ್ಲಿ ನಡೆದ 'ನಾವು ನಮ್ಮಲ್ಲಿ' ಕಾರ್ಯಕ್ರಮದಲ್ಲಿ ಆಲಿಸಿದೆ. ಎಷ್ಟು ಪ್ರಬುದ್ಧವಾಗಿ ಆಲೋಚನೆ ಮಾಡ್ತಾ ಇದ್ದಾರೆ, ಎಷ್ಟು ಚೆನ್ನಾಗಿ ವಿಚಾರ ಮಂಡಿಸುತ್ತಿದ್ದಾರೆ ಎಂದು ಸಂತೋಷವಾಯಿತು. ಅವರು ಮೈಸೂರಿನಲ್ಲಿ, ಓದು-ಬರಹ, ಚಿಂತನೆ ಕಾರ್ಯಕ್ರಮ ಮಾಡುವ ಜೀವಂತಿಕ ಮಿಡಿಯುವ ಗಳೆಯರ ಬಳಗದಲ್ಲಿರುವುದು ಗೊತ್ತಿತ್ತು. ಅಧ್ಯಯನಶೀಲತೆ ಮತ್ತು ವೈಚಾರಿಕ ಸ್ಪಷ್ಟತೆ ಇರುವ ಅನೇಕರಿಗೆ ಹೃದಯವಂತಿಕೆ ಇರುವುದಿಲ್ಲ. ಪ್ರಕಾಶ್ ಹೃದಯವಂತರಾಗಿದ್ದರು. ಅವರು ಕಷ್ಟಕ್ಕೊಳಗಾದವರಿಗೆ ಮಿಡಿಯುತ್ತಿದ್ದುದನ್ನು ಸುಕನ್ಯಾ ನನ್ನಲ್ಲಿ ಸದಾ ಹೇಳುತ್ತಿದ್ದರು ಎಂದು ಪ್ರೊ ರಹಮತ್ ತರೀಕೆರೆ ಅವರು ನುಡಿ ಕಥನಕ್ಕೆ ಬರೆದಿರುವ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.