ಜಾಗತೀಕರಣದ ಧಾವಂತದಲ್ಲಿ ಭಾರತದ ಹಲವಾರು ಹಳ್ಳಿಗಳು ಮೈಕೊಡವಿ ಏಳುವುದಕ್ಕೂ ಸಾಧ್ಯವಾಗದಿರುವಾಗ, ಒಂದು ಕಾಲಕ್ಕೆ ಕುಗ್ರಾಮವೆನಿಸಿಕೊಂಡಿದ್ದ ಕಾರ್ಕಳ ತಾಲೂಕಿನ ಕಾಂತಾವರ ತನ್ನ ಚಿಂತನೆಯ ಹರಹಿನೊಂದಿಗೆ ಜಾಗತೀಕರಣಕ್ಕೆ ಸವಾಲೊಡ್ಡುವ ಬೌದ್ದಿಕ ಚೈತನ್ಯವನ್ನು, ವಿಕಾಸವನ್ನು ಹೊಂದಿತ್ತು ಎಂದರೆ ಯಾರೂ ಅಲ್ಲಗಳೆಯಲಾರರು. ಇದಕ್ಕೆ ಕಾರಣ ಇಲ್ಲಿನ ಕನ್ನಡ ಸಂಘ, ಇದರಿಂದಾಗಿ ಈ ಊರಿನ ನರನಾಡಿಗಳಲ್ಲಿ ಕನ್ನಡ ಕಂಪು ಹರಿದಾಡುತ್ತಿರುವುದು.
ಇಂದು ಕಾಂತಾವರವನ್ನು ಪುಟ್ಟಹಳ್ಳಿ ಎಂದು ಪಕ್ಕಕ್ಕೆ ಸರಿಸಿ ಬಿಡುವಂತಿಲ್ಲ. ಆ ಬಗೆಯಲ್ಲಿ ಕನ್ನಡಸಂಘ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. 'ನುಡಿನಮನ' ಕಾರ್ಯಕ್ರಮದ ಅಕ್ಷರರೂಪದ ಹೊತ್ತಗೆ 'ನುಡಿಹಾರ'. ಇಂತಹ ನುಡಿಹಾರಕ್ಕೆ ಆರನೇ ಕುಸುಮದ ಸೇರ್ಪಡೆ -'ನುಡಿಹಾರ 6'. 'ಪುಸ್ತಕ ಪ್ರಕಟಣೆ' ಕನ್ನಡ ಸಂಘದ ಪ್ರಾತಿನಿಧಿಕ ಕೆಲಸಗಳಲ್ಲಿ ಒಂದು. 2008ರಿಂದ ಕನ್ನಡ ಸಂಘವು ಪ್ರತಿ ತಿಂಗಳು 'ನುಡಿನಮನ' ಎಂಬ ಸಂಸ್ಕೃತಿ ಸಂವರ್ಧನ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದೆ. ಅದರಲ್ಲಿ ರೂಪುಗೊಂಡ ಉಪನ್ಯಾಸಗಳೆಲ್ಲ ಬರಹದ ರೂಪ ಪಡೆದು “ನುಡಿಹಾರ’ವಾಗಿವೆ. ವಿವಿಧ ವಿಷಯಗಳಿಂದ ಓದುಗರನ್ನು ತತ್ಸಂಬಂಧೀ ಮಾಹಿತಿಗಳ ಕಡೆಗೆ ಆಕರ್ಷಿಸುವುದರೊಂದಿಗೆ ಅವುಗಳ ಆಳ, ವ್ಯಾಪ್ತಿಯನ್ನು ಪರಿಚಯಿಸುವ ಉದ್ದೇಶದಿಂದಲೇ ನುಡಿಹಾರದ ಮಾಲಿಕೆ ಕಾರ್ಯತತ್ಪರವಾಗಿದೆ.
©2024 Book Brahma Private Limited.