‘ಕನ್ನಡ ಕಟ್ಟೋಣ’ ಕೃತಿಯು ಪಾಟೀಲ ಪುಟ್ಟಪ್ಪ ಅವರ ಬೆಳಗಾವಿಯಲ್ಲಿ ಮಾರ್ಚ್ 7,8,9 ರಂದು ಜರಗಿದ ಅಖಿಲ ಭಾರತ 70ನೆಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನದಿಂದ ಮಾಡಿದ ಭಾಷಣದ ಪರಿಷ್ಕೃತ ಆವೃತ್ತಿಯಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿರುವ ಕೆಲವೊಂದು ವಿಚಾರಗಳು ಹೀಗಿವೆ; ಕನ್ನಡ ಮತ್ತು ಕರ್ನಾಟಕಕ್ಕೆ ಭವ್ಯ ಪರಂಪರೆ ಇದೆ. ಅವುಗಳ ಪ್ರಾಚೀನತೆ ದೊಡ್ಡದು. ಈ ಭೂಮಿಯ ಮೇಲೆ ಬದುಕುವುದನ್ನು ಬೆಳೆಯುವುದನ್ನು ಅವು ತೋರಿಸಿಕೊಟ್ಟಿವೆ. ಕನ್ನಡ ಭಾಷೆಯ ಜತೆಗೆ ಇದರ ಇತಿಹಾಸ ಹಾಗೂ ಸಂಸ್ಕೃತಿ ಬೆಳೆದುಕೊಂಡು ಬಂದಿವೆ. ಮನುಜ ಕುಲ ಒಂದೇ ಎನ್ನುವ ಸಂಸ್ಕೃತಿ ಆದರ್ಶವನ್ನು ಆದಿಕವಿ ಪಂಪನು ಕನ್ನಡ ಜನರ ಮನಸ್ಸಿನಲ್ಲಿ ಮೂಡಿಸಿದನು. ಕರ್ನಾಟಕವು ಕಾವೇರಿಯಿಂದ ಗೋದಾವರಿಯವರೆಗೆ ಹಚ್ಚಿಕೊಂಡಿದ್ದತ್ತೆಂಬುದು ಕೇವಲ ಕವಿಕಲ್ಪನೆ ಆಗಿರದೆ, ವಾಸ್ತವ ಸಂಗತಿಯೆ ಆಗಿದೆ. ಮಹಾರಾಷ್ಟ್ರದಲ್ಲಿರುವ ಜನರೆಲ್ಲರೂ ಕಳೆದುಹೋದ ಕನ್ನಡಿಗರೇ ಆಗಿದ್ದಾರೆ. ದೇವರೇ ಬಂದು ಕರ್ನಾಟಕ, ಮಹಾರಾಷ್ಟ್ರಗಳ ವಿಭಜನೆ ಮಾಡಿದರೂ ಕೆಲವರು ಕನ್ನಡಿಗರು ಮಹಾರಾಷ್ಟ್ರದಲ್ಲಿ, ಅದೇ ರೀತಿ ಕೆಲವರು ಮರಾಠಿಗರು ಕರ್ನಾಟಕದಲ್ಲಿ ಉಳಿದೇ ಉಳಿಯುತ್ತಾರೆ. ಅವರು ಸುಖವಾಗಿರುವಂತೆ ನೋಡಿಕೊಳ್ಳುವುದೇ ಎರಡು ರಾಜ್ಯಗಳ ಕರ್ತವ್ಯವಾಗಿದೆ. ಬೆಳಗಾವಿಯು ಕರ್ನಾಟಕ ಬಿಟ್ಟು ಎಂದೂ ಹೋಗಲಾರದು. ಮಹಾರಾಷ್ಟ್ರಕ್ಕೆ ಅದು ಎಂದೂ ಸಿಕ್ಕಲಾರದು. ಇದಂತೂ ಸರಿಯೆ ಬೆಳಗಾವಿಗೆ ಏನಾದೀತೋ ಎನ್ನುವ ಹೆದರಿಕೆಯನ್ನು ಮನಸ್ಸಿನಲ್ಲಿ ತಂದುಕೊಂಡು ಕರ್ನಾಟಕವು ಕಾಸರಗೋಡನ್ನು ಕೈಬಿಡಬಾರದು. ಕರ್ನಾಟಕದ ಅಪ್ಪಟ ಕನ್ನಡ ಸಂಸ್ಕೃತಿ ಕಾಸರಗೋಡಿನಲ್ಲಿಯೂ ಇದೆ. ಇದು ತಮ್ಮದೆಂದು ಸಾಧಿಸುವ ಯಾವ ಸಾಕ್ಷಿ ಪುರಾವೆಗಳೂ ಕೇರಳದ ಬಳಿ ಇಲ್ಲ. ಈಗ ಕರ್ನಾಟಕದಲ್ಲಿರುವ ಜನರಲ್ಲಿ ಒಬ್ಬರೊಬ್ಬರ ಮನಸ್ಸನ್ನು ಜೋಡಿಸುವ ಸೇತುವೆಗಳನ್ನು ನಿರ್ಮಿಸುವ ಕೆಲಸ ನಡೆಯಬೇಕು. ಕರ್ನಾಟಕದೊಳಗಿನ ವಿಭಿನ್ನ ಪ್ರದೇಶಗಳ ಜನರು ಒಬ್ಬರೊಬ್ಬರನ್ನು ಅರಿಯುವುದು ಅಗತ್ಯವಿರುವಂತೆ ಕರ್ನಾಟಕದ ಈ ಕನ್ನಡಿಗರು, ಕರ್ನಾಟಕದ ಹೊರಗಿರುವ ಕನ್ನಡಿಗರನ್ನೂ ತಿಳಿಯುವುದು ಅಗತ್ಯವಿದೆ’ ಎಂದಿದೆ.
©2024 Book Brahma Private Limited.