ಸುಮಾರು 25 ವರ್ಷಗಳ ಕಾಲ ವಿವಿಧ ಕಾರ್ಯಕ್ರಮಗಳಲ್ಲಿ ಬಿ.ಎ. ವಿವೇಕ್ ರೈ ಅವರು ಮಾಡಿದ ಭಾಷಣದ ಸಂಗ್ರಹ ರೂಪವೇ ’ಕನ್ನಡ-ದೇಸಿ ಸಮ್ಮಿಲನದ ನುಡಿಗಳು’. ಜಾನಪದ ಮತ್ತು ದೇಸಿ ಸಮ್ಮೇಳನಗಳ ಅಧ್ಯಕ್ಷ ಭಾಷಣಗಳಿಂದ ತೊಡಗಿ ಜಾನಪದ ಸಂಬಂಧಿಯಾದ ಇತರೆ ಕೆಲವು ಉಪನ್ಯಾಸಗಳು ಇಲ್ಲಿವೆ. ಜಾನಪದ ಸಮ್ಮೇಳನ, ದೇಸಿ ಸಮ್ಮೇಳನ ಮತ್ತು ಕನ್ನಡ ವಿಶ್ವವಿದ್ಯಾಲಯದ ಸಮ್ಮೇಳನಗಳು ಒಂದುಗೂಡಿರುವ ಕಾರಣ ಈ ಗ್ರಂಥಕ್ಕೆ ’ಕನ್ನಡ-ದೇಸಿ ಸಮ್ಮಿಲನದ ನುಡಿಗಳ” ಎನ್ನುವ ಶೀರ್ಷಿಕೆ ಕೊಟ್ಟಿದ್ದಾರೆ ಲೇಖಕರು. ಈ ಕೃತಿಯ ಭಾಷಣವೊಂದರ ತುಣುಕು ನಿಮ್ಮ ಓದಿಗಾಗಿ: ’ಸುಖದ ಮತ್ತು ಸಂತೃಪ್ತಿಯ ಪರಿಕಲ್ಪನೆಯು ಜನಪದ ಸಂಸ್ಕೃತಿಯಲ್ಲಿ ವಿಶಿಷ್ಟ ಮತ್ತು ವೈವಿಧ್ಯಮಯವಾದುದು. ಆಹಾರ ಮತ್ತು ಪಾನೀಯಗಳು ಅಂತಹ ಸುಖದ ಮತ್ತು ಸಂತೃಪ್ತಿಯ ಭಾವನೆಯನ್ನು ಅನೇಕ ರೀತಿಗಳಲ್ಲಿ ಕೊಡುತ್ತಾ ಬಂದಿವೆ. ವ್ಯಕ್ತಿಗಳು ನಿರ್ದಿಷ್ಟವಾದ ಆಹಾರ ಸೇವನೆಯಿಂದ ಸಂತೃಪ್ತಿಯನ್ನು ಪಡೆಯಬಹುದು. ಆದರೆ, ತಮ್ಮ ಸುತ್ತಮುತ್ತಲೂ ಬದುಕುತ್ತಿರುವ ಅನೇಕ ಮಂದಿ ಇಂತಹ ಸಂತೃಪ್ತಿಯನ್ನು ಪಡೆಯಲು ಸಾಧ್ಯವಾಗಿದೆಯೇ ಎನ್ನುವುದರ ಕುರಿತು ಯೋಚನೆ ಮಾಡುವುದು ಕೂಡ ಜನಪದ ಸಂಸ್ಕೃತಿಯ ಪುನರುಜ್ಜೀವನದ ಈ ಸಂದರ್ಭದಲ್ಲಿ ಹೆಚ್ಚು ಮುಖ್ಯವಾದುದು. ಆಹಾರದಲ್ಲಿ ಸರ್ವರಿಗೂ ಸಮಪಾಲು ಅನ್ನುವ ತತ್ವ ಮೂಲತಃ ಜನಪದ ಸಂಸ್ಕೃತಿಯ ಸಂದೇಶ. ಆದ್ದರಿಂದಲೇ, ಹಸಿವಿನಿಂದ ನರಳುವವರ ಕುರಿತು ನಮ್ಮ ನಿಜವಾದ ಭಾವನೆಗಳು ಕಾರ್ಯರೂಪಕ್ಕೆ ಬರಬೇಕಾಗಿರುವುದು ಆಹಾರದ ಸಮರ್ಪಕ ಹಂಚಿಕೆಯಾಗುವ ಮತ್ತು ಸಂತೃಪ್ತಿಗಳು ಎಲ್ಲರಿಗೂ ಸಾಧಿತವಾಗುವ ಮೂಲಕ. ’ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎನ್ನುವ ಸಂದೇಶ ಜನಪದ ತಾತ್ವಕತೆಯಾಗಿ ಆಹಾರ ಕ್ಷೇತ್ರದಲ್ಲಿ ನಿಜವಾಗುವಂತೆ ಜಾನಪದ ಸಂಶೋಧಕರು ತಮ್ಮ ಅಧ್ಯಯನಗಳನ್ನು ನಡೆಸಬೇಕಾಗಿದೆ’.
©2024 Book Brahma Private Limited.