‘ಮಾತು ಮಂಥನ’ ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಭಾಷಣ-ಬರಹಗಳ ಸಂಕಲನ. ಈ ಕೃತಿಗೆ ಹಿರಿಯ ವಿದ್ವಾಂಸ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಬೆನ್ನುಡಿ ಬರೆದಿದ್ದಾರೆ. ಮೂಡ್ನಾಕೂಡು ಚಿನ್ನಸ್ವಾಮಿ ಸೂಕ್ಷ್ಮ ಪ್ರತಿಭೆಯ ಕವಿ. ಕವಿತೆಯ ಮೂಲಕವೇ ತನನ್ನು ಗುರುತಿಸಿಕೊಳ್ಳುವಂತೆ ಕವಿಯಾಗಿ ಬೆಳೆದ ಇವರು ಕತೆಗಳನ್ನು ಬರೆದುದುಂಟು. ಇಲ್ಲಿಯ ಲೇಖನಗಳು ಸಾಮಾಜಿಕ ಸಾಂದರ್ಭಿಕ ವಿನ್ಯಾಸದಲ್ಲಿಯೇ ಮೈಪಡೆದಿವೆ ಎನ್ನುತ್ತಾರೆ ಮಲ್ಲೇಪುರಂ. ಹಾಗೇ ಸಮಕಾಲೀನ ಸಾಹಿತ್ಯ, ಸಂಸ್ಕೃತಿ, ಸಮಾಜ, ಭಾಷೆ, ಜಾತಿ ವ್ಯವಸ್ಥೆ, ಇತಿಹಾಸ ಮುಂತಾದ ವಿಷಯಗಳನ್ನು ಕೇವಲ ಮಾತುಗಳನ್ನಾಗಿಸದೆ ಅವುಗಳನ್ನು ಮಂಥನಗಳಾಗಿ ರೂಪುಗೊಳಿಸಿರುವುದು ಗಮನಿಸತಕ್ಕ ಅಂಶ. ಮಂಥನವೆಂದರೆ ಕಡೆಯುವುದೆಂದೇ ಅರ್ಥ. ಮೊಸರನ್ನು ಕಡೆದು ಬೆಣ್ಣೆಯನ್ನು ತೆಗೆಯುವಂತೆ ಇಲ್ಲಿ ಮಾತೆಂಬ ಮೊಸರನ್ನು ಕಡೆದು ವಿಚಾರಗಳೆಂಬ ಬೆಣ್ಣೆಯನ್ನು ತೆಗೆದಿರುವುದು ನಾವು ಗಮನಿಸಬೇಕಾದ ಸಂಗತಿ. ಅಲ್ಲಮನು ಮಾತೆಂಬುದೇ ಜ್ಯೋತಿರ್ಲಿಂಗವೆಂದು ಹೇಳುತ್ತಾನೆ. ಇಲ್ಲಿಯ ಲೇಖನಗಳು ವೈಚಾರಿಕ ಬೆಳಕಿನ ಕಿರಣಗಳಾಗಿ ಪರಿಣಮಿಸಿರುವುದು ವಿಶೇಷ ಎಂದು ಮಲ್ಲೇಪುರಂ ಜಿ. ವೆಂಕಟೇಶ ಅವರು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.