‘ಬಾನುಲಿದ ಬೇಂದ್ರೆ ಬೆರಗು’ ಬೇಂದ್ರೆ ಬಾನುಲಿ ಸಾಹಿತ್ಯದ ಸಪ್ತವರ್ಣ ದರ್ಶನ. ಈ ಹೊತ್ತಿಗೆಯ ಮುಖಪುಟದಲ್ಲಿ ಬೇಂದ್ರೆಯವರ ಭಾವಚಿತ್ರದ ಜೊತೆ ರೇಡಿಯೋ ನೋಡುತ್ತೀರಿ. ಅದು ಬೇಂದ್ರೆ ಜೀವನ ಪರ್ಯಂತ ಅವರ ಸಂಗಾತಿಯಾದುದು. ಸಾಧನಕೇರಿಯ 'ಶ್ರೀಮಾತಾ'ದಲ್ಲಿ ಅದು ಇಂದಿಗೂ ಇದೆ. ತನ್ನ ಪಕ್ಕದಲ್ಲಿ ಬೇಂದ್ರೆ ಇಲ್ಲದಿರುವ ಹಳಹಳಿ ಅದಕ್ಕೂ ಇರಬಹುದು. ಇದು ಬಾನುಲಿಯೊಂದಿಗಿನ ಅವರ ಅವಿನಾಭಾವದ ಸಂಬಂಧ ಹೇಳುತ್ತಿದೆ. ಬೇಂದ್ರೆ ಒಬ್ಬ ಅಪ್ಪಟ ಬಾನುಲಿ ಪ್ರಸಾರಕ ಕೂಡ ಆಗಿದ್ದರು. ಹತ್ತು ವರ್ಷ ಸಲಹಾಗಾರರಾಗಿ ಅವರ ಸೇವೆ ಆಕಾಶವಾಣಿಗೆ ಸ೦ದಿದೆ . ಬಹಳಷ್ಟು ಜನಕ್ಕೆ ಬಾನುಲಿಯೊಂದಿಗಿನ ಅವರ ನಿರಂತರದ ಒಡನಾಟ, ಬಾನುಲಿ ಮಾಧ್ಯಮಕ್ಕೆ ಅವರ ಕೊಡುಗೆ ಇವು ಅವರ ವ್ಯಕ್ತಿತ್ವದ ಅಪರಿಚಿತ ಮುಖ. `ಬಾನುಲಿದ ಬೇಂದ್ರೆ ಬೆರಗು' ಈ ಅಪರಿಚಿತ ಮುಖವನ್ನು ಅನಾವರಣಗೊಳಿಸುತ್ತಿದೆ. ಈ ಕೃತಿಯ ಲೇಖಕ ಸಿ.ಯು.ಬೆಳ್ಳಕ್ಕಿ ಅವರು ಆಕಾಶವಾಣಿ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಬಾನುಲಿ ಪ್ರಸಾರಕ, ಮಾಧ್ಯಮ ಲೇಖಕ, ಹಾಗೂ ವಿಶ್ರಾಂತ ಆಕಾಶವಾಣಿ ನಿರ್ದೆಶಕರು. ನೂರಾರು ಸೃಜನಾತ್ಮಕ, ವಿನೂತನ ಕಾರ್ಯಕ್ರಮಗಳನ್ನು ನಿರೂಪಿಸಿದ ಕ್ರಿಯಾಶೀಲರು. “ಬೇಂದ್ರೆ ಬಾನುಲಿ ಸಾಹಿತ್ಯದ ಸಪ್ತ ವರ್ಣ ದರ್ಶನ- ಬಾನುಲಿದ ಬೇಂದ್ರೆ ಬೆರಗು, ಬೇಂದ್ರೆಯವರು 'ಬಾನುಲಿ ಸಾಹಿತ್ಯ'ಕ್ಕೆ ನೀಡಿರುವ ವಿಶೇಷ ಕೊಡುಗೆಯ ಮಾಹಿತಿ ನೀಡುತ್ತದೆ..
©2025 Book Brahma Private Limited.