ಆಕಾಶವಾಣಿಯಲ್ಲಿ ವೃತ್ತಿನಿರತರಾಗಿದ್ದ ಸಿ.ಯು. ಬೆಳ್ಳಕ್ಕಿಯವರು ಪ್ರವೃತ್ತಿಯಲ್ಲಿಯೂ ಮಾಧ್ಯಮವನ್ನು ಪ್ರೀತಿಸಿದವರು. ಧ್ವನಿ ಮಾಧ್ಯಮದ ನೂರು ಸಾಧ್ಯತ್ಯೆಗಳ ಬಗ್ಗೆ ಪ್ರಯೋಗಶೀಲರಾಗಿದ್ದಾಗಲೇ ಗಾಳಿಯಲ್ಲಿ ತೇಲಿದ ಮಾತುಗಳನ್ನು ಅಕ್ಷರರೂಪದಲ್ಲಿ ದಾಖಲಿಸಿದವರು. ಅನೇಕ ಪ್ರಸಾರಕರನ್ನು ಮಾರ್ಗದರ್ಶನ ನೀಡಿ ಬೆಳೆಸಿದರು. ಬಾನುಲಿಯ ಕುರಿತಾಗಿ ಕನ್ನಡದಲ್ಲಿ ಇವರಷ್ಟು ನಿರಂತರವಾಗಿ ಬರೆಯುತ್ತಾ ಬಂದವರು ಮತ್ತೊಬ್ಬರಿಲ್ಲ ಎಂದರೆ ಅತಿಶಯೋಕ್ತಿಯಲ್ಲ. ಅಂತೆಯೇ ಬಾನುಲಿಯ ವಿವಿಧ ವಿಭಾಗಗಳಲ್ಲಿ ಅಧ್ಯಯನ ಹಾಗೂ ಅಭಿವ್ಯಕ್ತಿ ಬೆಳೆಸಿಕೊಂಡಿರುವ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ವಿಶ್ರಾಂತ ಬದುಕಿನಲ್ಲೂ ವೃತ್ತಿಯ ನಂಟನ್ನು ನಿರ್ಲಕ್ಷಿಸದೆ ಮಾತಿನ ಮನೆಯ ಬೆರಗನ್ನು ಕೇಳುವ ಕೌತುಕವಾಗಿ ಲಿಪಿಬದ್ಧಗೊಳಿಸಿದ್ದಾರೆ. ಅಲ್ಲದೇ ಮಾಧ್ಯಮಲೋಕದ ಕುರಿತಾಗಿ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.