ಸುಕನ್ಯಾ ಎಸ್. ಓ. ಇವರು ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ಸಾಸಲು ಗ್ರಾಮದಲ್ಲಿ ೧೯೮೧ ರಲ್ಲಿ ಓಂಕಾರ ಸ್ವಾಮಿ ಹಾಗೂ ಓಂಕಾರಮ್ಮನವರ ಮಗಳಾಗಿ ಜನಿಸಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸಾಸಲಿನಲ್ಲಿ ಪೂರೈಸಿ, ಪದವಿ ಶಿಕ್ಷಣವನ್ನು ಚಿಕ್ಕನಾಯಕನಹಳ್ಳಿಯ ನವೋದಯ ಕಾಲೇಜಿನಲ್ಲಿ, ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಬೆಂಗಳೂರು ವಿವಿಯಲ್ಲಿ ಡಿ.ಎಲ್. ನರಸಿಂಹಾಚಾರ್ ಚಿನ್ನದ ಪದಕದೊಂದಿಗೆ ಪೂರೈಸಿದರು. ೨೦೦೮ ರಲ್ಲಿ ಪ್ರೊ. ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ಆಧುನಿಕ ಕನ್ನಡ ಕಾವ್ಯದಲ್ಲಿ ದಾಂಪತ್ಯದ ಕಲ್ಪನೆ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಹಂಪಿ ವಿಶ್ವವಿದ್ಯಾಲಯದಿಂದ ಪಡೆದರು. ೨೦೦೯ ರಲ್ಲಿ ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು ಪ್ರಸ್ತುತ ಬೆಂಗಳೂರಿನ ಅಗರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಪ್ರಕಾಶ್ ಬಡವನಹಳ್ಳಿ ಅವರ ಬರಹ ಹಾಗೂ ಭಾಷಣಗಳನ್ನು ಒಟ್ಟುಗೂಡಿಸಿ ನುಡಿ ಸಂಕಥನ ಎಂಬ ಪುಸ್ತಕವನ್ನು ಸಂಪಾದಿಸಿದ್ದಾರೆ. ಸಾವಿರದ ನೆನಪುಗಳು ಅನುಭವ ಕಥನವನ್ನು ಬರೆದಿರುತ್ತಾರೆ.