ಕನ್ನಡದಲ್ಲಿ ನುಡಿಯರಿಮೆಯ ಕುರಿತಾಗಿ ಬಂದಿರುವ ಬರಹಗಳು ತುಂಬಾ ಕಡಿಮೆ. ಇವುಗಳಲ್ಲಿ ಹೆಚ್ಚಿನವೂ ಇಂಗ್ಲಿಶ್ ಪದಗಳಿಗೆ ಬದಲಾಗಿ ಸಂಸ್ಕ್ರುತ ಪದಗಳನ್ನು, ಇಲ್ಲವೇ ಸಂಸ್ಕೃತದ ಪದ ಮತ್ತು ಒಟ್ಟು(ಪ್ರತ್ಯಯ)ಗಳನ್ನು ಬಳಸಿ ಹೊಸದಾಗಿ ಉಂಟುಮಾಡಿದ ಪದಗಳನ್ನು ಬಳಸುತ್ತವೆ. ಇಂತಹ ಬರಹಗಳನ್ನು ಓದಿ ತಿಳಿದುಕೊಳ್ಳುವುದು ಕಶ್ಟ. ಇದಲ್ಲದೆ, ಇಂತಹ ಬರಹಗಳನ್ನು ಕನ್ನಡದಲ್ಲಿ ಹೊಸದಾಗಿ ಬರೆಯಬೇಕೆಂದಿರುವವರಿಗೆ ತಮಗೆ ಬೇಕಾಗುವ ಹೊಸಪದಗಳನ್ನು ಉಂಟುಮಾಡಲು ಸಂಸ್ಕ್ರುತದ ತಿಳಿವು ಬೇಕಾಗುತ್ತದೆ. ಇಂತಹ ಬರಹಗಳಿಗೆ ಬೇಕಾಗುವ ಹೊಸಪದಗಳನ್ನು ಕನ್ನಡದಲ್ಲೇ ಉಂಟುಮಾಡಲು ಬರುತ್ತದೆ ಎಂಬುದನ್ನು ಈ ಪದನೆರಕೆ ತೋರಿಸಿಕೊಡುತ್ತದೆ, ಮತ್ತು ಹಲವಾರು ಅಂತಹ ಪದಗಳನ್ನೂ ಕಟ್ಟಿಕೊಡುತ್ತದೆ. ಇದಲ್ಲದೆ ಈ ಪದಗಳ ಕುರಿತಾಗಿ ವಿವರಣೆಯನ್ನೂ ಉದಾಹರಣೆಗಳೊಂದಿಗೆ ಕೊಡುತ್ತದೆ. ಸಂಸ್ಕ್ರುತ ಪದಗಳ ಬದಲು ಇಂತಹ ಕನ್ನಡದ್ದೇ ಆದ ಪದಗಳನ್ನು ಬಳಸಿದಲ್ಲಿ ಅವನ್ನು ಬಳಸಿರುವ ಬರಹಗಳನ್ನು ಓದಿ ತಿಳಿಯುವ ಕೆಲಸ ಹೆಚ್ಚು ಸುಲಭವಾಗಬಲ್ಲುದು. ಇದಲ್ಲದೆ, ಇಂತಹ ಕನ್ನಡದ್ದೇ ಆದ ಪದಗಳನ್ನು ಉಂಟುಮಾಡಲು ಕನ್ನಡದ ತಿಳಿವು ಇದ್ದರೆ ಸಾಕಾಗುತ್ತದೆ; ಸಂಸ್ಕ್ರುತದ ತಿಳಿವು ಬೇಕಾಗುವುದಿಲ್ಲ. ಹಾಗಾಗಿ, ಈ ಪುಸ್ತಕದ ನೆರವಿನಿಂದ ಕನ್ನಡದಲ್ಲಿ ಹೆಚ್ಚು ಹೆಚ್ಚು ನುಡಿಯರಿಮೆಯ ಮತ್ತು ಸೊಲ್ಲರಿಮೆಯ ಕುರಿತಾಗಿ ಬರಹಗಳನ್ನು ಬರೆಯುವ ಪ್ರಯತ್ನಗಳು ನಡೆಯಲಿ, ಮತ್ತು ಕನ್ನಡದ್ದೇ ಆದ ಪದಗಳನ್ನು ಬಳಸುವ ಮೂಲಕ ಅವು ಹೆಚ್ಚು ಹೆಚ್ಚು ಓದುಗರನ್ನು ತಲುಪುವಂತಾಗಲಿ ಎಂಬುದು ನನ್ನ ಹಾರಯ್ಕೆ.
©2024 Book Brahma Private Limited.