ಹಿರಿಯ ಲೇಖಕ ಡಿ.ಎನ್. ಶಂಕರ ಬಟ್ ಅವರು ಅಂತಾರಾಷ್ಟ್ರೀಯ ಖ್ಯಾತಿಯ ಭಾಷಾಶಾಸ್ತ್ರಜ್ಞರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಸ್ನಾತಕ್ಕೋತ್ತರ ಪದವೀಧರರು. ಪುಣೆ ವಿಶ್ವವಿದ್ಯಾಲಯದಿಂದ ನುಡಿಯರಿಮೆ(linguistics)ಯಲ್ಲಿ ಪಿ.ಎಚ್.ಡಿ.ಪದವೀಧರರು. ಅಮೇರಿಕಾದ ಸ್ಟ್ಯಾನ್ಪೋರ್‍ಡ್ ಯುನಿವರ್‍ಸಿಟಿ, ಆಸ್ಟ್ರೇಲಿಯಾದ ಲಾ ಟ್ರೋಬೆ ಯುನಿವರ್‍ಸಿಟಿ, ಬೆಲ್ಜಿಯಂ ದೇಶದ ಆಂಟ್ವೆರ್‍ಪ್ ಯುನಿವರ್‍ಸಿಟಿ, ಜರ್‍ಮನಿಯ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್‍ನಂತಹ ಜಗತ್ತಿನ ಹಲವಾರು ಮುಂಚೂಣಿಯ ವಿಶ್ವವಿದ್ಯಾಲಯಗಳಲ್ಲಿ ಮತ್ತು ಮಯ್ಸೂರಿನಲ್ಲಿರುವ ಬಾರತೀಯ ಬಾಶಾ ಸಂಸ್ತಾನ, ಮಣಿಪುರ ವಿಶ್ವವಿದ್ಯಾಲಯ, ಪುಣೆಯಲ್ಲಿರುವ ಡೆಕ್ಕನ್ ಕಾಲೇಜ್ ಮುಂತಾದೆಡೆ ಕಲಿಸುಗರಾಗಿ, ಅರಕೆಗಾರರಾಗಿ ಕೆಲಸ ಮಾಡಿದ್ದಾರೆ. ನುಡಿಯರಿಮೆಯ ಸುತ್ತ ಬರೆದಿರುವ ಅವರ ಹತ್ತಾರು ಹೊತ್ತಗೆಗಳು ಮತ್ತು ಅರಕೆಯ ಪೇಪರಗಳು (research papers) ಜಗತ್ತಿನೆಲ್ಲೆಡೆ ಹೆಸರುಗಳಿಸಿವೆ. ಕನ್ನಡ ನುಡಿಯ ಬಗ್ಗೆ ಶಂಕರ ಬಟ್ಟರು ಹಲವು ವರುಶಗಳ ಆಳವಾದ ಅರಕೆ ನಡೆಸಿದ್ದು, ಈ ನಿಟ್ಟಿನಲ್ಲಿ ಪಡೆದುಕೊಂಡ ತಿಳುವಳಿಕೆಗಳನ್ನು ಒಗ್ಗೂಡಿಸಿ ಹಲವು ಹೊತ್ತಗೆಗಳನ್ನು ಬರೆದಿದ್ದಾರೆ. ಕನ್ನಡ ನುಡಿಯು ನಡೆದು ಬಂದ ದಾರಿ, ಕನ್ನಡದಲ್ಲಿರುವ ವ್ಯಾಕರಣದ ನಿಜವಾದ ಕಟ್ಟಲೆಗಳು, ಕನ್ನಡದ ಪದ ಸೊಗಡು ಮುಂತಾದವುಗಳ ಕುರಿತು ಬಟ್ಟರು ಬರೆದಿರುವ ಕನ್ನಡ ನುಡಿಯರಿಮೆಯ ಹೊತ್ತಗೆಗಳು, 'ಕನ್ನಡ ಭಾಷೆಯ ಚರಿತ್ರೆ' ಅವರ ಮೊದಲ ಹೆಜ್ಜೆಯಾಗಿದ್ದು ಅವರು ರಚಿಸಿರುವ ಪ್ರೌಢಕೃತಿ. ಕನ್ನಡವಾಕ್ಯಗಳು, ಕನ್ನಡ ಶಬ್ದರಚನೆ, ಕನ್ನಡ ಸರ್ವನಾಮಗಳು, ಅನನ್ಯ ಕೃತಿಗಳೆಂದು ಗುರುತಿಸಲಾಗಿವೆ. ಅವರ ಇನ್ನೊಂದು ಮುಖ್ಯಕೃತಿ, 'ಕನ್ನಡಕ್ಕೆ ಬೇಕು, ಕನ್ನಡದ್ದೇ ವ್ಯಾಕರಣ' ಅವರ ಸಂಶೋಧನೆಗಳ ತಾತ್ವಿಕ ನೆಲೆಗಳು, ಅತ್ಯಂತ ಮುಖ್ಯ. 2010ರಲ್ಲಿ ಹಂಪಿಯ ವಿಶ್ವವಿದ್ಯಾಲಯದಿಂದ “ನಾಡೋಜ” ಗೌರವ, ಪಂಪ ಪ್ರಶಸ್ತಿ, ಶಂ.ಬಾ. ಜೋಶಿ ಪ್ರಶಸ್ತಿ ದೊರೆತಿದೆ. ಹಿಂದಿನಿಂದ ಕಣ್ಣುಮುಚ್ಚಿ ನಂಬಿಕೊಂಡು ಬಂದಿದ್ದ ಹಲವಾರು ತಪ್ಪು ತಿಳುವಳಿಕೆಗಳನ್ನು ಮತ್ತು ಅವುಗಳನ್ನು ಸರಿಪಡಿಸುವ ಬಗೆಗಳನ್ನು ಕನ್ನಡ ಸಮಾಜಕ್ಕೆ ತೋರಿಸಿಕೊಟ್ಟಿವೆ. (ಸೆಲೆ :- http://dnshankarabhat.net)