ಕನ್ನಡ- ತಮಿಳು ಸಾಹಿತ್ಯಗಳ ತೌಲನಿಕ ಅಧ್ಯಯನವನ್ನು ತಿಳಿಸುವುದರ ಹಿನ್ನೆಲೆಯಾಗಿ ’ಅನನ್ಯ’ ಕೃತಿಯ ಮೂಲಕ ಓದುಗರಿಗೆ ನೀಡಿರುವವರು ಡಾ.ತಮಿಳ್ ಸೆಲ್ವಿಯವರು.
ಕರ್ನಾಟಕದ ಹೊರಗಿನ ವಿಶ್ವವಿದ್ಯಾಲಯಗಳಲ್ಲಿನ ಕನ್ನಡ ವಿಭಾಗಗಳಲ್ಲಿ ಕೆಲಸ ಮಾಡುವ ಕನ್ನಡ ಅಧ್ಯಾಪಕರ, ಕನ್ನಡ ಸಂಶೋಧಕರ ಜವಾಬ್ದಾರಿ ಕರ್ನಾಟಕದಲ್ಲಿ ಕೆಲಸ ಮಾಡುವ ಅಧ್ಯಾಪಕ, ಸಂಶೋಧಕರಿಗಿಂತ ಹೆಚ್ಚಿನದು. ಒಂದು ರೀತಿಯಲ್ಲಿ ಅವರು ಕನ್ನಡ ಭಾಷಾ-ಸಂಸ್ಕೃತಿಯ, ವಿದ್ವತ್ತಿನ ರಾಯಭಾರಿಗಳೂ ಆಗಿರುತ್ತಾರೆ. ಇವರು ತಮ್ಮ ಕೆಲಸ ಕಾರ್ಯಗಳನ್ನು ಎಷ್ಟು ಸಮರ್ಥವಾಗಿ ನಿರ್ವಹಿಸುತ್ತಾರೆ ಎಂಬುದರ ಮೇಲೆ ನಮ್ಮ ಭಾಷಾ-ಸಂಸ್ಕೃತಿಗಳ ಅಧ್ಯಯನ ಅವರಿರುವ ಪರಿಸರದ ಭಾಷಾ-ಸಾಹಿತ್ಯಗಳ ಅಧ್ಯಯನ, ಸಂಶೋಧನಾ ಜಗತ್ತಿನ ಕ್ವಿತಿಜವನ್ನು ವಿಸ್ತರಿಸುತ್ತದೆ, ವಿಸ್ತರಿಸಬೇಕು. ಹಾಗೆಯೇ ಕನ್ನಡ ಭಾಷಾ ಸಾಹಿತ್ಯಗಳ ಅಧ್ಯಯನ ಸಂಶೋಧನೆಗಳೂ ಸಹ ವಿಸ್ತಾರಗೊಳ್ಳುತ್ತವೆ.
ಅನಿವಾರ್ಯವಾಗಿಯೋ ಅಥವಾ ಸ್ವಂತ ಉಮೇದಿನಿಂದಲೋ ಇವರು ಎರಡೂ ಭಾಷಾ-ಸಾಹಿತ್ಯಗಳನ್ನು ಅಧ್ಯಯನ ಮಾಡುತ್ತಾ ಮಾಡುತ್ತಾ ತೌಲನಿಕವಾಗಿ ಎರಡೂ ಭಾಷಾ-ಸಾಹಿತ್ಯಗಳ ಸ್ವರೂಪ, ಚರಿತ್ರೆಗಳನ್ನು ವಿಶ್ಲೇಷಿಸುವ ಕೆಲಸ ಮಾಡುತ್ತಾರೆ. ಇಂಥಾ ವಿದ್ವತ್ತಿನ ಒಂದು ಪರಂಪರೆಯಿದೆ. ಈ ಪರಂಪರೆಯನ್ನು ಡಾ.ತಮಿಳ್ ಸೆಲ್ವಿಯವರು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಈ ಸಂಕಲನದಲ್ಲಿ ಎಲ್ಲಾ ಲೇಖನಗಳೂ ತಮಿಳುಸಾಹಿತ್ಯವನ್ನೋ, ಕನ್ನಡ ಸಾಹಿತ್ಯವನ್ನೋ ಪ್ರತ್ಯೇಕವಾಗಿ ಮತ್ತು ತೌಲನಿಕವಾಗಿ ಗ್ರಹಿಸುವುದಕ್ಕೆ ಉಪಕರಿಸುತ್ತವೆ.
©2024 Book Brahma Private Limited.