ಕೇಶಿರಾಜನೇ ಮೊದಲಾದ ಹಳೆಗನ್ನಡ ವಯ್ಯಾಕರಣಿಗಳು ಸಂಸ್ಕೃತದ ವ್ಯಾಕರಣ ನಿಯಮಗಳನ್ನು ಹಾಗೆಯೇ ಹಳೆಗನ್ನಡಕ್ಕೆ ಅಳವಡಿಸಲು ಸಾಧ್ಯ ಎಂಬ ಭ್ರಮೆಯಲ್ಲಿದ್ದರು. ಈ ಭ್ರಮೆಯಿಂದಾಗಿ ಅವರು ತಮ್ಮ ವ್ಯಾಕರಣಗಳ ಹೆಚ್ಚಿನ ವಿಭಾಗಗಳಲ್ಲೂ ಹಳೆಗನ್ನಡ ವ್ಯಾಕರಣದ ನಿಜವಾದ ಸ್ವರೂಪ ಎಂತಹುದು ಎಂಬುದನ್ನು ವಿವರಿಸಿ ಹೇಳುವಲ್ಲಿ ಎಡವಿದ್ದಾರೆ. ಇದನ್ನು ಈ ಪುಸ್ತಕದಲ್ಲಿ ಸ್ಪಷ್ಟವಾಗಿ ತೋರಿಸಿಕೊಡಲಾಗಿದೆ. ನಿಜಕ್ಕೂ ಹಳೆಗನ್ನಡ ವ್ಯಾಕರಣವು ಅದರ ಮೂಲತತ್ವಗಳಲ್ಲೇನೆ ಸಂಸ್ಕೃತ ವ್ಯಾಕರಣಕ್ಕಿಂತ ಭಿನ್ನವಾಗಿದೆ. ಹಾಗಾಗಿ, ಹಳೆಗನ್ನಡ ವ್ಯಾಕರಣವನ್ನು ಬರೆಯುವಲ್ಲಿ ಸಂಸ್ಕೃತ ವ್ಯಾಕರಣ ಉತ್ತಮ ಮಾದರಿಯಾಗಲಾರದು. ಸಂಸ್ಕೃತ ವ್ಯಾಕರಣದ ನಿಯಮಗಳನ್ನು ಬದಿಗಿರಿಸಿ, ನೇರವಾಗಿ ಹಳೆಗನ್ನಡ ಗ್ರಂಥಗಳಲ್ಲಿ ಬರುವ ಪದ, ಪದಕಂತೆ, ವಾಕ್ಯ ಮೊದಲಾದವುಗಳ ರಚನೆಯೆಂತಹುದು ಎಂಬುದನ್ನು ಪರಿಶೀಲಿಸಿ ವರ್ಣಿಸಲು ಪ್ರಯತ್ನಿಸಿದಾಗ ಮಾತ್ರ ನಿಜವಾದ ಹಳೆಗನ್ನಡ ವ್ಯಾಕರಣ ಸಿದ್ದವಾಗಬಲ್ಲುದು. ಈ ರೀತಿ ಸಿದ್ದಪಡಿಸಿರುವ ನಿಜವಾದ ಹಳೆಗನ್ನಡ ವ್ಯಾಕರಣ ಹೇಗೆ ಸಂಸ್ಕೃತ ವ್ಯಾಕರಣಕ್ಕಿಂತ ಭಿನ್ನವಾಗಿರಬಲ್ಲುದು ಎಂಬುದನ್ನು ಈ ಪುಸ್ತಕದಲ್ಲಿ ತೋರಿಸಿಕೊಡಲಾಗಿದೆ.
ಹೊಸತು- ಆಗಸ್ಟ್-2005
ಶ್ರೇಷ್ಠ ಭಾಷಾವಿಜ್ಞಾನಿಯಾದ ಡಿ. ಎನ್. ಶಂಕರಭಟ್ ಅವರು ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಬೆಲೆಬಾಳುವ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಅವರ ಪಾಂಡಿತ್ಯ ಮತ್ತು ಒಳನೋಟಗಳು ಬೆರಗನ್ನುಂಟುಮಾಡುತ್ತವೆ. ಸಂಸ್ಕೃತ ಭಾಷೆಯ ಮಾದರಿಯಲ್ಲಿ ಕನ್ನಡ ವ್ಯಾಕರಣಗಳು ರಚಿತವಾದುದ್ದರಿಂದ ಉಂಟಾದ ಗೊಂದಲಗಳನ್ನು ಭಟ್ ಅವರು ತಮ್ಮ ವಿಚಾರಗಳಲ್ಲಿ ವೈಜ್ಞಾನಿಕವಾಗಿ ಆಧಾರಗಳ ಮೂಲಕ ತಿಳಿಸಿಕೊಡುತ್ತಾರೆ. ಈ ಕೃತಿಯಲ್ಲಿಯೂ ಕನ್ನಡದ ವ್ಯಾಕರಣ ತತ್ತ್ವಗಳು ಸಂಸ್ಕೃತಕ್ಕಿಂತ ಭಿನ್ನವಾಗಿದ್ದು ಹಳೆಗನ್ನಡ ವ್ಯಾಕರಣ ಸಂಸ್ಕೃತದ ಮಾದರಿಯನ್ನು ಅನುಸರಿಸಿ ಯಾವ ರೀತಿ ದಾರಿ ತಪ್ಪಿತು ಎಂಬ ಸಂಗತಿ ಯನ್ನು ವಿವರವಾಗಿ ಕಾಣಬಹುದು. ಕೃತಿ ರಚನೆಯಲ್ಲಿ ಸಾಕಷ್ಟು ಪೂರ್ವಸಿದ್ಧತೆಯನ್ನು ಗುರುತಿಸ ಬಹುದು. ಸರ್ವನಾಮಗಳ ಬಗ್ಗೆ ಪುಸ್ತಕವೊಂದನ್ನು ಬರೆಯಲು ಪ್ರಪಂಚದ ಬೇರೆ ಬೇರೆ ಭಾಷೆ ಗಳಲ್ಲಿ ಬಳಕೆಯಲ್ಲಿರುವ ನಾಲ್ಕು ನೂರಕ್ಕಿಂತಲೂ ಹೆಚ್ಚು ವ್ಯಾಕರಣಗಳನ್ನು ಪರಿಶೀಲಿಸಿದ್ದಾರೆ ಎಂಬ ಸಂಗತಿ ಇವರ ವಿದ್ವತ್ತಿಗೆ ಸಾಕ್ಷಿ, ಭಟ್ಟರ ಚಿಂತನೆಗಳು ಶಿಕ್ಷಣ ವ್ಯವಸ್ಥೆಯಲ್ಲಿ ಸೇರದೇ ಇರುವುದು ಹಾಗೂ ಆ ಬಗ್ಗೆ ಸಾಕಷ್ಟು ಚರ್ಚೆ ಆಗದೇ ಇರುವುದು ಬೇಸರದ ಸಂಗತಿ.
©2024 Book Brahma Private Limited.