‘ಸರಿಗನ್ನಡಂ ಗೆಲ್ಗೆ’ ರಘು ಅಪಾರ ಅವರ ಕನ್ನಡದ ಪದಯಾತ್ರೆ ಕುರಿತ ಸಂಕಲನವಾಗಿದೆ. ‘ಕನ್ನಡತಿ’ ಸೀರಿಯಲ್ಲಿನ ಪ್ರತಿ ಸಂಚಿಕೆಯ ಕಡೆಯಲ್ಲಿ ಒಂದು ನಿಮಿಷದ ಕನ್ನಡ ಪಾಠವಾಗಿ ಶುರುವಾದದ್ದು ’ಸರಿಗನ್ನಡಂ ಗೆಲ್ಗೆ’ ಎನ್ನುತ್ತಾರೆ ಲೇಖಕರು. ಸುಮಾರು ಏಳುನೂರು ಪಾಠಗಳ ಮೂಲಕ ಸಾವಿರಾರು ಕನ್ನಡ ಪದಗಳ ಬಗ್ಗೆ ಚರ್ಚಿಸಲು ಅನುವು ಮಾಡಿಕೊಟ್ಟ ಅಪರೂಪದ ‘ಪದ’ಯಾತ್ರೆಯ ಕತೆಯು ‘ಸರಿಗನ್ನಡಂ ಗೆಲ್ಗೆ’ ಕೃತಿಯ ಮೂಲಕ ಓದುಗರಿಗೆ ದೊರಕುತ್ತಿದೆ. ‘ತಪ್ಪಾಗೋದು ದೊಡ್ಡ ವಿಷಯ ಅಲ್ಲ, ಸರಿ ಮಾಡ್ಕೊಳೋದು ಸಣ್ಣ ವಿಷಯವೂ ಅಲ್ಲ’ ಎನ್ನುವ ಕಿರುಪಾಠ ಎಲ್ಲರಿಗೂ ನೆಚ್ಚಿತ್ತು. ‘ಪದಾರ್ಥ ಚಿಂತಾಮಣಿ’, ‘ಶಬ್ದಾಶಬ್ದ ವಿವೇಕ’ದಂಥ ಪುಸ್ತಕಗಳನ್ನು ಬರೆದ ಪಾ ವೆಂ ಆಚಾರ್ಯ, ‘ಇಗೋ ಕನ್ನಡ’ದ ಜಿ ವೆಂಕಟಸುಬ್ಬಯ್ಯ, ಕನ್ನಡ ಪದಗಳ ಚರ್ಚೆಗಾಗಿ ಇರುವ ಫೇಸ್ ಬುಕ್ಕಿನ ಗುಂಪುಗಳಾದ ‘ಪದಾರ್ಥ ಚಿಂತಾಮಣಿ’ ಮತ್ತು ‘ವಾಗರ್ಥ’, ಹಾಗೆಯೇ, ಪಿ ವಿ ನಾರಾಯಣರ ‘ಪದಚರಿತೆ’, ಶ್ರೀವತ್ಸ ಜೋಶಿಯವರ ‘ಸ್ವಚ್ಛ ಭಾಷೆ ಅಭಿಯಾನ’ ಅಂಕಣದ ಬರಹಗಳಿಂದಲೂ ವಿಚಾರಗಳನ್ನು ಪಡೆಯಲಾಗಿದೆ. ರತ್ನಕೋಶ, ಕಿಟ್ಟೆಲ್ ಕೋಶಗಳ ಜೊತೆಗೆ ಇಂಟರ್ ನೆಟ್ಟಿನಲ್ಲಿರುವ ಬರಹ ನಿಘಂಟು, ಅಲರ್ ನಿಘಂಟುಗಳೂ ಈ ಕೃತಿಯ ದಾರಿಯನ್ನು ಬೆಳಗಿವೆ.
©2025 Book Brahma Private Limited.