ಮಾತಿನ ಬಗ್ಗೆ ಏನೇ ಹೇಳುವುದಿದ್ದರೂ ಅದರ ಒಳಗುಟ್ಟನ್ನು ಅರಿಯುವುದು ಅಗತ್ಯ ಎಂಬುದನ್ನು ಈ ಪುಸ್ತಕ ತೋರಿಸಿಕೊಡುತ್ತದೆ. ನಮ್ಮ ನಾಲಿಗೆಯ ತುದಿಯಲ್ಲೇ ಕುಣಿಯುತ್ತಿದೆಯಾದರೂ ಕಣ್ಣು, ಕಿವಿ ಮೊದಲಾದವುಗಳ ಹಾಗೆ ನಮ್ಮ ಮಾತೂ ತುಂಬಾ ಸಂಕೀರ್ಣವಾದುದು. ಅದರ ಕುರಿತಾಗಿ ಎಷ್ಟು ಕಲಿತರೂ, ಎಷ್ಟು ಸಂಶೋಧನೆ ನಡೆಸಿದರೂ ನಮಗೆ ಅದು ಪೂರ್ತಿ ಅರ್ಥವಾಗಿದೆಯೆಂದು ಹೇಳುವ ಎದೆಗಾರಿಕೆ ಇವತ್ತು ಯಾರಿಗೂ ಇಲ್ಲ. ಹೀಗಿದ್ದರೂ ಮಾತಿನ ಕುರಿತಾಗಿ ಇವತ್ತು ನಾವು ಪಡೆದುಕೊಂಡಿರುವ ತಿಳಿವಳಿಕೆಯನ್ನು ಆದಷ್ಟು ಮಟ್ಟಿಗೆ ಬಳಸಿಕೊಳ್ಳುವುದು ಅವಶ್ಯ.
ಅದು ಎಂತಹುದು ಎಂಬುದನ್ನು ಈ ಪುಸ್ತಕದಲ್ಲಿ ಚುಟುಕಾಗಿ ವಿವರಿಸಲಾಗಿದೆ. ಮಾತಿನ ಕುರಿತು ನುಡಿಗಳ ಕುರಿತು, ಓದು-ಬರಹದ ಕುರಿತು ನಮ್ಮಲ್ಲಿ ಹಲವಾರು ಅನಿಸಿಕೆಗಳಿವೆ. ಇವುಗಳಲ್ಲಿ ಹಲವು ಸರಿಯಿಲ್ಲ ಎಂಬುದನ್ನು ಈ ತಿಳಿವಳಿಕೆಯ ಆಧಾರದ ಮೇಲೆ ಹೇಳಲು ಸಾಧ್ಯವಿದೆ. ಉದಾಹರಣೆಗಾಗಿ ಮಕ್ಕಳಿಗೆ ಇಂಗ್ಲಿಶ್ ಚೆನ್ನಾಗಿ ಬರಬೇಕೆಂಬುದು ಅವರನ್ನು ತಾಯಿನುಡಿಯಿಂದ ದೂರಮಾಡಿದರೆ ಇಲ್ಲವೇ ತಾಯಿನುಡಿಯ ಮೇಲೆ ಅವರಿಗೆ ಕೀಳರಿಮೆಯುಂತಾಗುವ ಹಾಗೆ ಮಾಡಿದರೆ, ಅವರಿಂದ ಮಾತಿನ ಬುಡಕಟ್ಟನ್ನೇ ಕಿತ್ತುಕೊಂಡ ಹಾಗಾಗುತ್ತದೆ.
ನಿಜಕ್ಕೂ ಎರಡು ಇಲ್ಲವೇ ಹೆಚ್ಚು ನುಡಿಗಳನ್ನು ಕಲಿತ ಮಕ್ಕಳು ಒಂದೇ ನುಡಿ ಕಲಿತವರಿಗಿಂತ ಹಲವು ವಿಷಯಗಳಲ್ಲಿ ಮುಂದಿರುವುದು ಕಂಡುಬಂದಿದೆ. ಇದನ್ನು ತಿಳಿಯದಿರುವ ಹಲವು ಮಂದಿ ಕನ್ನಡಿಗರು ಇಂಗ್ಲಿಶ್ ನುಡಿಯ ಮೇಲಿರುವ ಮೋಹದಿಂದಾಗಿ ಇವತ್ತು ತಮ್ಮ ಮಕ್ಕಳನ್ನು ಅವರ ತಾಯಿನುಡಿಯಿಂದ ದೂರಮಾಡುತ್ತಿದ್ದಾರೆ ಮತ್ತು ಆ ಮೂಲಕ ಅವರ ಬುದ್ದಿಶಕ್ತಿಯನ್ನೇ ಹಾಳುಗೆಡವುತ್ತಿದ್ದಾರೆ. ಇಂತಹ ಹಲವಾರು ವಿಷಯಗಳನ್ನು ಈ ಕೃತಿಯಲ್ಲಿ ಪ್ರಸ್ತಾಪಿಸಲಾಗಿದೆ.
©2024 Book Brahma Private Limited.