ಲೇಖಕ ಬಿ. ಪುಟ್ಟಸ್ವಾಮಯ್ಯ ಅವರು ಬರೆದ ಇತಿಹಾಸ ಕೃತಿ ʼ ಕನ್ನಡ ರಂಗಭೂಮಿ ನಡೆದು ಬಂದ ದಾರಿʼ. ಪುಸ್ತಕವು ಇಲ್ಲಿ ನಾಡಿನ ಸಂಸ್ಕೃತಿ, ನಾಟಕ, ಸಂಗೀತ, ಚಿತ್ರಕಲೆಗಳಿಗೆ ಸಿಕ್ಕ ಅವಕಾಶ ಹಾಗೂ ಅವುಗಳು ನಡೆದು ಬಂದ ದಾರಿಯನ್ನು ಹೇಳುತ್ತದೆ. ಲೇಖಕರು ಹೇಳುವಂತೆ, ಕನ್ನಡ ರಂಗಭೂಮಿಗೆ ಮೈಸೂರಿನ ಅರಸುಮನೆತನವು ಸಲ್ಲಿಸಿದ ಸೇವೆ ಅಪಾರ. ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಅವರ ಆಶ್ರಿತ ಅಳಿಯ ಲಿಂಗರಾಜ ಅರಸರು ಸುಮಾರು 70 ಯಕ್ಷಗಾನ ನಾಟಕ ಗಳನ್ನು ರಚಿಸಿದರು. ದಿವಂಗತ ಚಾಮರಾಜ ಒಡೆಯರು, ನನ್ನ ಪ್ರಾಯ ವಾಗಿದ್ದ ನಾಟಕಕಲೆಯ ಉದ್ಧಾರಕ್ಕಾಗಿ ತಮ್ಮ ರಾಜಧನವನ್ನು ವೆಚ್ಚಮಾಡಿ ನಾಟಕ ಸಂಸ್ಥೆಯೊಂದನ್ನು ಸ್ಥಾಪಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರು ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದು ಖಾಸಗಿ ನಾಟಕ ಸಂಸ್ಥೆಗಳಿಗೆ ವಿಶೇಷ ಪ್ರೋತ್ಸಾಹ ಕೊಟ್ಟರು. ಕರ್ನಾಟಕದ ಯಾವುದೇ ಭಾಗದಲ್ಲಿಯಾದರು ಒಳ್ಳೆಯ ನಾಟಕವಾಡುತ್ತಿದ್ದಾರೆಂದು ತಿಳಿದರೆ ಸ್ವತಃ ಅರಸರೇ ಆ ಸಂಸ್ಥೆಯನ್ನು ಮೈಸೂರಿಗೆ ಕರೆಸಿಕೊಂಡು, ವಚನ ಬಂಗಲೆಯ ನಾಟ್ಯ ಶಾಲೆಯಲ್ಲಿ ನಾಟಕ ಆಡಿಸಿ, ವೆಚ್ಚ, ಪಾರಿತೋಷಕಗಳನ್ನು ನೀಡಿ ಗೌರವಿಸುತ್ತಿದ್ದರು. ಕನ್ನಡ ರಂಗಭೂಮಿಯ ಸ್ವರ್ಣಯುಗವೆಂದು ಕರೆದಿರುವ ಈ ಶತಮಾನದ ಮೊದಲ ಅರ್ಧಭಾಗದ ರಂಗಭೂಮಿಯ ಇತಿಹಾಸ ಮೈಸೂರು ಅರಸರಿಂದ ಪ್ರಭಾವಿತವಾಯಿತೆಂದರೆ ಅತಿಶಯೋಕ್ತಿಯಲ್ಲ.
©2024 Book Brahma Private Limited.