ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತ ಅವರ ಕೃತಿ-ಅರಸಿಕರಲ್ಲ. ರಷ್ಯಾ ಮತ್ತು ಪೂರ್ವ ಜರ್ಮನಿಗಳ ರಂಗ ನಿರೀಕ್ಷಣೆಯನ್ನು ಈ ಕೃತಿ ಒಳಗೊಂಡಿದೆ. ಕಲೆ, ಸಾಹಿತ್ಯ, ಚಿತ್ರಕಲೆ, ವಿಜ್ಞಾನ ಹೀಗೆ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿರುವ ಲೇಖಕರು, ರಂಗಭೂಮಿಯಲ್ಲೂ ತಮ್ಮ ಆಸಕ್ತಿಯನ್ನು ಪ್ರದರ್ಶಿಸಿದ್ದು ಮಾತ್ರವಲ್ಲ; ಅದರಲ್ಲೂ ಪ್ರಭುತ್ವ ತೋರಿದ್ದು ಈ ಕೃತಿ ಸಾಕ್ಷಿ ನುಡಿಯುತ್ತದೆ.
ರಷ್ಯಾ ಹಾಗೂ ಜರ್ಮನ್ ಜನತೆ ಆಸ್ತಿಕರಲ್ಲದವರು. ಅವರು ಕೇವಲ ಭೌತವಾದಿಗಳು. ಎಂಬ ಭಾವನೆ ಜನರಲ್ಲಿದೆ. ಅವರಿಗೂ ಬದುಕಿನ ಸವಿ ಗೊತ್ತಿದೆ. ಅದನ್ನು ವಸ್ತುವಾದಿ ರಾಷ್ಟ್ರಗಳಾದ ಕಮ್ಯುನಿಸ್ಟ್ ಜರ್ಮನಿ ಹಾಗೂ ರಷ್ಯ ದೇಶಗಳು ಹೇಗೆ ಸಾಧಿಸಿವೆ ಎಂಬುದನ್ನು ತೋರಿಸಲು ಈ ‘ಅರಸಿಕರಲ್ಲ’ ಹೆಸರು ನೀಡಿದ್ದಾಗಿ ಲೇಖಕರು ಸ್ಪಷ್ಟಪಡಿಸಿದ್ದಾರೆ.
ಭಾರತ ಸರ್ಕಾರದ ಸಾಂಸ್ಕೃತಿಕ ಸಂಬಂಧ ಸಂಸ್ಥೆಯಿಂದ ದೇಶದ ಪ್ರತಿನಿಧಿಯಾಗಿ ಆ ದೇಶಗಳಿಗೆ ತೆರಳಿದ್ದ ಅವರು, ಆ ದೇಶಗಳ ಕಲೆ, ಸಂಸ್ಕೃತಿಗಳ ಅಧ್ಯಯನ ಮಾಡಿದ್ದರ ಮಾಹಿತಿ ಇದೆ. ಬರ್ಲಿನ್ ದೇಶದ ರಂಗಭೂಮಿ, ಗೊಂಬೆ ಆಟಗಳು, ಸರ್ಕಸ್, ವೈಮಾರ್ ಹಾಗೂ ಲಿಪಿ ಜಿಗ್ ಗಳ ಸಂದರ್ಶನ, ಚಿತ್ರಶಾಲೆ, ವಸ್ತು ಸಂಗ್ರಹಾಲಯ ಇತ್ಯಾದಿಗಳ ವಿವರಗಳಿವೆ. ಮಾಸ್ಕೊದಲ್ಲಿಯ ಹೆರ್ಮಿಟೇಜ್ ಮ್ಯೂಜಿಯಂಗೆ ಭೇಟಿ ನೀಡಿ ವಾಸ್ತಶಿಲ್ಪ ಕಲೆ, ರಂಗ ಕಲೆಗಳ ಕುರಿತ ತಮ್ಮ ಒಳನೋಟಗಳ ಬರಹಗಳಿವೆ. ಜೊತೆಗೆ ರಂಗಕಲೆಗಳ ಕಪ್ಪು-ಬಿಳುಪು ಚಿತ್ರಗಳು ಗಮನ ಸೆಳೆಯುತ್ತವೆ. ಎಲ್ಲರೂ ಸಮಾನರು ಎಂದು ಹೇಳುವ ರಷ್ಯಾ ದೇಶದಲ್ಲಿಯ ಬಡತನದ ಚಿತ್ರವನ್ನೂ ನೀಡಿದ್ದಾರೆ.
ಸಾಗರದ ಅಕ್ಷರ ಪ್ರಕಾಶನವು 1987ರಲ್ಲಿ (ಪುಟ:181) ಈ ಪ್ರವಾಸ ಕಥನವನ್ನು ಮೊದಲ ಬಾರಿಗೆ ಪ್ರಕಟಿಸಿತ್ತು.
©2025 Book Brahma Private Limited.