ಯಕ್ಷಗಾನದ ಕಲಾವಿದರಾದ ಹೊಸ್ತೋಟ ಮಂಜುನಾಥ ಭಾಗವತರ ’ಚಿತ್ರಪಟ ರಾಮಾಯಣ’ ಬಹಳ ವಿಶಿಷ್ಟವಾದ ಕೃತಿಯಾಗಿದೆ. ಕೃತಿಯ ಪಠ್ಯ ಮತ್ತು ಚಿತ್ರಪಟ ರಾಮಾಯಣದ ಬಗೆಗಿನ ಹನ್ನೊಂದು ಲೇಖನಗಳನ್ನು ಒಳಗೊಂಡ ಈ ಕೃತಿಯನ್ನು ಪತ್ರಕರ್ತ, ಯಕ್ಷಗಾನ ಕಲಾವಿದರಾದ ಪೃಥ್ವಿರಾಜ ಕವತ್ತಾರರು ಸಂಪಾದಿಸಿದ್ದಾರೆ.
ಚಿತ್ರಪಟ ರಾಮಾಯಣದ ರಂಗಪ್ರಸ್ತುತಿಯನ್ನು ನಿರ್ದೇಶಿಸಿದ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣರು ತಮ್ಮ ಅನುಭವವನ್ನು ಇಲ್ಲಿ ದಾಖಲಿಸಿದ್ದಾರೆ. ಲೇಖಕಿ ವೈದೇಹಿ ಅವರು ’ಪ್ರತಿ ರಾಮಾಯಣದಲ್ಲಿಯೂ ಹೀಗೆಯೇ ಯಾಕಾಗಬೇಕು?' ಎಂಬ ಪ್ರಶ್ನೆಯನ್ನು ಎತ್ತುತ್ತಾ ಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಹೆಣ್ಣು ಗಂಡಿನ ಸಂಬಂಧವನ್ನು ಲೈಂಗಿಕ ನೆಲೆಯಿಂದ ನೋಡುವ ರಾಮ ಪಿತೃತ್ವದ ಸಂಕೇತವಾದರೆ, ಅದೇ ಸಂಬಂಧವನ್ನು ತಾಯ್ತನದ ನೆಲೆಯಿಂದ ನೋಡುವ ಸೀತೆ ಮಾತೃತ್ವದ ಸಂಕೇತವಾಗುತ್ತಾಳೆ' ಎಂಬ ವಿನಯಾ ಒಕ್ಕುಂದ ಅವರ ಬರಹದ ಸಾಲು, ಇಡೀ ಕೃತಿಗೆ ಹೊಸದೊಂದು ಒಳನೋಟವನ್ನು ನೀಡುತ್ತದೆ.
©2024 Book Brahma Private Limited.