ಈ ಪುಸ್ತಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಹವ್ಯಕರಲ್ಲಿ ಬಳಕೆಯಲ್ಲಿರುವ ಕನ್ನಡ ಒಳನುಡಿಯ ಪರಿಚಯವನ್ನು ಮಾಡಿಕೊಡಲಾಗಿದೆ. ಬರಹ ಕನ್ನಡಕ್ಕೂ ಈ ಒಳನುಡಿಗೂ ನಡುವೆ, ಹಳೆಗನ್ನಡಕ್ಕೂ ಈ ಒಳನುಡಿಗೂ ನಡುವೆ, ಕರಾವಳಿಯ ಬೇರೆ ಒಳನುಡಿಗಳಿಗೂ ಈ ಒಳನುಡಿಗೂ ನಡುವೆ, ಮತ್ತು ಕುಮಟಾ, ಶಿರಸಿ, ಸಿದ್ದಾಪುರ, ಹಾಗೂ ಸಾಗರದ ಹವ್ಯಕ ಒಳನುಡಿಗಳಿಗೂ ಈ ಒಳನುಡಿಗೂ ನಡುವೆ ಎಂತಹ ಹೋಲಿಕೆ ಇದೆ ಎಂಬುದನ್ನು ತಿಳಿಸುವ ಮೂಲಕ ಈ ಕೆಲಸವನ್ನು ನಡೆಸಿಕೊಡಲಾಗಿದೆ.
ಕನ್ನಡ ನುಡಿಯ ಚರಿತ್ರೆಯನ್ನು ತಿಳಿಯುವಲ್ಲಿ ಹವ್ಯಕ ಕನ್ನಡದ ಪರಿಚಯವನ್ನು ಮಾಡಿಕೊಳ್ಳುವುದು ತುಂಬಾ ಮುಕ್ಯವೆಂದು ಹೇಳಬಹುದು. ಯಾಕೆಂದರೆ, ಕನ್ನಡದ ಯಾವ ಬರಹದಲ್ಲೂ ಕಾಣಿಸಿಕೊಳ್ಳದಂತಹ ಕೆಲವು ಮುಂದ್ರಾವಿಡ ಪರಿಚೆಗಳನ್ನು ಹವ್ಯಕ ಕನ್ನಡ ಉಳಿಸಿಕೊಂಡಿದೆ. ಹಾಗಾಗಿ, ಕನ್ನಡದ ಹಿನ್ನಡವಳಿಯನ್ನು ತೀರಾ ಹಳೆಯ ಕನ್ನಡ ಬರಹಗಳಿಗಿಂತಲೂ ಹಿಂದಕ್ಕೆ ತೆಗೆದುಕೊಂಡು ಹೋಗುವಲ್ಲಿ ಈ ಒಳನುಡಿ ನೆರವಾಗುತ್ತದೆ.
ಕರಾವಳಿಯ ಬೇರೆ ಒಳನುಡಿಗಳ ಹಾಗೆ, ಹವ್ಯಕ ಕನ್ನಡವೂ ಹಳೆಗನ್ನಡದ ಹಲವು ಪರಿಚೆಗಳನ್ನು ತೋರಿಸುತ್ತಿದೆ. ಆದರೆ, ಇದಕ್ಕೆ ಹವ್ಯಕ ಕನ್ನಡ ಹಳೆಗನ್ನಡವಾಗಿ ಉಳಿದಿರುವುದು ಕಾರಣವಲ್ಲ; ಕನ್ನಡದ ಬೇರೆ ಒಳನುಡಿಗಳ ಹಾಗೆ ಹವ್ಯಕ ಕನ್ನಡವೂ ತಲೆಮಾರಿನಿಂದ ತಲೆಮಾರಿಗೆ ಮಾರ‍್ಪಡುತ್ತಾ ಬಂದಿದೆ. ಅದರಲ್ಲಿ ಬೇರೆಯವಕ್ಕಿಂತ ಹೆಚ್ಚು ಹಳೆಗನ್ನಡದ ಪರಿಚೆಗಳು ಕಾಣಿಸಿಕೊಳ್ಳುವುದಕ್ಕೆ ಬೇರೆಯೇ ಕಾರಣಗಳಿವೆ ಎಂಬುದನ್ನೂ ಈ ಪುಸ್ತಕದಲ್ಲಿ ತೋರಿಸಿಕೊಡಲಾಗಿದೆ.
©2024 Book Brahma Private Limited.