`ಸೂಫಿ ಅಧ್ಯಾತ್ಮ ದರ್ಶನ’ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಸೂಫಿ ವಿಚಾರಧಾರೆಗಳ ಕುರಿತ ಕೃತಿಯಾಗಿದೆ. ತಮ್ಮ ಬದುಕಿನಲ್ಲಿ ಸೂಫಿಗಳು ನಿಜಕ್ಕೂ ಸದಾ ಧ್ಯಾನದಲ್ಲಿ ಮಗ್ನರಾಗಿರುವವರಾದರೂ, ಜಗತ್ತನ್ನು ಸಂಪೂರ್ಣವಾಗಿ ತೊರೆದಿರುವವರು ಎನ್ನಲಾಗದು. ತಮ್ಮ ವೈಯಕ್ತಿಕ ಸಾಧನೆಯ ಗುರಿಯನ್ನು ಮಾತ್ರ ಹೊಂದಿರದೆ, ಸಮಸ್ತ ಮಾನವೀಯ ಅಂತಸ್ಸಾಕ್ಷಿಯ ಮತ್ತು ನೈತಿಕತೆಯ ಪ್ರತೀಕವಾಗಿ ಕಂಡುಬರುತ್ತಾರೆ. ವೈಯಕ್ತಿಕ ಮೋಕ್ಷಸಾಧನೆಯಲ್ಲಿ ಮಾತ್ರ ನಿರತರಾಗಿರದೆ ತಮ್ಮ ಪ್ರವಚನಗಳು, ಬೋಧನೆಗಳ ಮೂಲಕ ಮುಂದಿನ ಜನಾಂಗದ ಮಾರ್ಗದರ್ಶಿಗಳಾಗಿ ಮತ್ತು ಸರ್ವ ಮಾನವ ಜನಾಂಗದ ಒಳಿತಿಗಾಗಿ ಸದಾ ಕಾರ್ಯೋನ್ಮುಖರಾಗಿರುವವರು ಇವರು. ತಮ್ಮ ಹಿರಿಯ ಸೂಫಿ ಉಲೇಮಾಗಳು (ಗುರುಗಳು) ಹಾಕಿಕೊಟ್ಟ ಸರ್ವ ಜನಾಂಗದ ಶಾಂತಿ, ಸಹೋದರತ್ವ, ಸೌಹಾರ್ದತೆ, ಪ್ರೇಮದ ಅಧ್ಯಾತ್ಮ ಪಥ ಮುಂತಾದ ಮಾರ್ಗದರ್ಶಿ, ತತ್ವಾದರ್ಶಗಳನ್ನು ತಮ್ಮ ಕಾಲದ ನಿಯಮ, ಆದರ್ಶಗಳಿಗೆ ಅಳವಡಿಸಿಕೊಂಡು ನಡೆಸುವ ಹೊಣೆಗಾರಿಕೆಯನ್ನು ನಿಭಾಯಿಸುವ ಮಹತ್ವದ ಉದ್ದೇಶ ತಮ್ಮ ಮುಂದಿದೆ ಎಂದು ಇವರು ತಿಳಿದಿರುತ್ತಾರೆ. ಬದುಕು ಮತ್ತು ಬದುಕಿನ ಸೃಷ್ಟಿಯೇ ಒಂದು ಅಧ್ಯಾತ್ಮ ರಹಸ್ಯವೆಂದು ಸೂಫಿ ಪಥವನ್ನು ಆರಿಸಿಕೊಂಡ ಸಾಧಕರು ತಿಳಿದಿರುತ್ತಾರೆ. ಜಗತ್ತು ತಾಂತ್ರಿಕವಾಗಿ ಅಭಿವೃದ್ಧಿ ಹೊಂದಿದಂತೆ, ಹೆಚ್ಚು ಭಯ, ಭೀಕರತೆ ಕಂಡುಬಂದಂತೆ ಮತ್ತು ಬದುಕು ಅಗ್ರಾಹ್ಯವಾದಂತೆ, ಹೆಚ್ಚು ಹೆಚ್ಚು ತಿಳಿದುಕೊಂಡಿರುವುದು ಮುಖ್ಯವಾಗುತ್ತದೆ. ಹಿಂದಿನ ತಲೆಮಾರಿನ ಅತ್ಯಂತ ಶ್ರೇಷ್ಠ ಸೂಫಿ ಸಂತ ಗುರುಗಳು ಬದುಕಿದ ಬದುಕಿನ ಮಾದರಿ ಮತ್ತು ಬೋಧನೆಯು ಇಂದಿನ ಕಾಲದ ಜಗತ್ತಿಗೆ ಮಾರ್ಗದರ್ಶಿ ಯಾಗಿ, ಜ್ಞಾನದ ಮೂಲವಾಗಿ ವ್ಯಕ್ತವಾಗುವ ಜೊತೆಗೆ, ಇಂದಿಗೆ ಅತ್ಯಂತ ಹೆಚ್ಚು ಅವಶ್ಯಕವಾಗಿರುವಂತೆ ಕಂಡುಬರುತ್ತದೆ. ಇಂದು ಹೆಚ್ಚಿನವರು ಜಾಗತಿಕ ಸತ್ಯ ಎಂಬುದು ಇಲ್ಲವೆಂದು ನಂಬಿದ್ದಾರೆ. ಸತ್ಯ ಮತ್ತು ನೈತಿಕತೆಯ ಸಂಬಂಧ ಸಾಂದರ್ಭಿಕ ಎಂದು ತಿಳಿದಿದ್ದಾರೆ. ಇದು ಸೂಫಿ ಪಂಥದ ತತ್ವಕ್ಕೆ, ನಂಬಿಕೆಗೆ ವ್ಯತಿರಿಕ್ತವಾದುದು. ಇಂದು ನಮ್ಮ ಮುಂದೆ ಲೋಭ, ಭ್ರಷ್ಟತೆ, ವಿರೋಧಿಗಳನ್ನು ಸಹಿಸಿಕೊಳ್ಳಲಾರದ ರಾಜಕೀಯಶಕ್ತಿ, ಅಪ್ರಾಮಾಣಿಕ ಬದುಕು ವಿಜೃಂಭಿಸುತ್ತಿದೆ. ವ್ಯಾಪಾರ ವಹಿವಾಟು, ರಾಜಕೀಯ, ಧಾರ್ಮಿಕ ಬದುಕು ಲಜ್ಜೆಗೆಟ್ಟು ಅನಾಚಾರದಲ್ಲಿ ಮುಳುಗಿವೆ. ಕ್ರೌರ್ಯವು ಎಲ್ಲೆ ಮೀರಿ ಮನುಷ್ಯ ರಾಕ್ಷಸನಂತೆ ವರ್ತಿಸುವಾಗ ನಾವು ಅಶಾಂತಿಯಲ್ಲಿ, ತೀವ್ರವಾದ ಆತಂಕದಲ್ಲಿ ಮುಳುಗಿರು ತ್ತೇವೆ. ನೈತಿಕ, ಪ್ರಾಮಾಣಿಕ ಮಾರ್ಗದ ಬದುಕು ಸಾಧ್ಯವೇ ಇಲ್ಲವೇನೋ ಎಂಬ ಅಧೀರತೆ ನಮ್ಮನ್ನು ಆವರಿಸಿದೆ. ಹೀಗಿರುವಾಗ ನಮಗೆ ಸ್ವಲ್ಪಮಟ್ಟಿಗಾದರೂ ಸಾಂತ್ವನ ನೀಡುವುದು ಸೂಫಿ, ಭಕ್ತಿ ಪಂಥದ ಬೋಧನೆಗಳು ಮಾತ್ರ ಎನ್ನುತ್ತದೆ ಈ ಕೃತಿ.
©2024 Book Brahma Private Limited.