ಹರಿಪಾದಾರ್ಪಿತ ಮನಸ್ಸಿನ ದಾಸರು ರಚಿಸಿದ ಕೀರ್ತನೆಗಳಲ್ಲಿ ಸಮಾಜಮುಖಿಯಾದ ಕೀರ್ತನೆ ಗಳನ್ನು ಆಯ್ದು ಅದನ್ನು ಸೂಕ್ತ ಟಿಪ್ಪಣಿಗಳೊಡನೆ ಇಲ್ಲಿ ವಿವರಿಸಲಾಗಿದೆ. ಹರಿದಾಸರೆಲ್ಲ ಒಂದೇ ವರ್ಗ, ವರ್ಣ, ಜಾತಿ ಮತ್ತು ಪ್ರದೇಶದಿಂದ ಬಂದವರಲ್ಲ. ಅವರ ನೆಲೆ, ಹಿನ್ನೆಲೆ, ಸಾಧನೆಗಳು, ಚಿಂತನೆಗಳು ಸಾಕಷ್ಟು ವಿಫುಲತೆಯನ್ನು, ವಿವಿಧತೆಯನ್ನು ಧಾರಣ ಮಾಡಿಕೊಂಡಿವೆ. ಈ ಎಲ್ಲ ಕೀರ್ತನೆಗಳ ಮೂಲಸ್ಥಾಯಿ ಹರಿಭಕ್ತಿಯೇ ಆಗಿದ್ದರೂ ಆ ಭಕ್ತಿಯನ್ನು ಅವರು ಪ್ರತಿಪಾದಿಸುವ ರೀತಿಗಳು ಅವರವರ ಅನುಭವ, ಅಭ್ಯಾಸ ಮತ್ತು ಅನುಭಾವದ ಹಿನ್ನೆಲೆಯಲ್ಲಿ ಅನನ್ಯತೆಯ ಸತ್ವವನ್ನು ಗರ್ಭೀಕರಿಸಿಕೊಂಡಿವೆ. ಈ ಮಾನವ ಜೀವನ ಭಗವಂತನ ಯೋಜನೆಯಂತೆ ಕಲ್ಪನೆಯಂತೆ, ಸೂತ್ರದಂತೆ ನಡೆಯುವ ಪರನಿಯಂತ್ರಿತ ವ್ಯವಸ್ಥೆ ಎಂಬ ಆಶಯ ಇವುಗಳಲ್ಲಿ ಸೂಚಿತವಾಗಿದ್ದರೂ, ಈ ದೇಹ ಮತ್ತು ಬದುಕುಗಳು ನೀರ ಮೇಲಣ ಗುಳ್ಳೆಗಳು, ಅವುಗಳಿಗೆ ಸರ್ವತಂತ್ರ ಸ್ವಾತಂತ್ರ್ಯ ಇಲ್ಲ ಮತ್ತು ಅವು ಕ್ಷಣಿಕ ಎಂಬ ನಿವೃತ್ತಿಪರ ಸಂವೇದನೆಗಳು ಇಲ್ಲಿ ಹೂರಣಗೊಂಡಿದ್ದರೂ, ಅವುಗಳ ಹಿನ್ನೆಲೆಯಲ್ಲಿ ವ್ಯಕ್ತಾವ್ಯಕ್ತವಾಗಿ ಮನುಷ್ಯ ಬದುಕಿನ ಮಹತಿಯನ್ನು ಅವು ಪ್ರತಿಪಾದಿಸುತ್ತವೆ.
©2025 Book Brahma Private Limited.