ಹ. ಶ್ರೀ. ಶ್ರೀಪತಿ ಅವರು ಅಧ್ಯಾಪಕರಾಗಿ ಮತ್ತು ಶಿಕ್ಷಕ ತರಬೇತುದಾರರಾಗಿ ಕೆಲಸ ಮಾಡಿದವರು. ಶಿಕ್ಷಕ ವೃತ್ತಿಯ ಜೊತೆಯಲ್ಲಿಯೇ ರಂಗಭೂಮಿಯನ್ನು ಬಳಸಿ ಶಿಕ್ಷಣಮಾಧ್ಯಮಕ್ಕೆ ಏನೇನು ಸಹಾಯ ಪಡೆಯಬಹುದು ಎಂಬುದನ್ನು ಚಿಂತಿಸಿ, ಪ್ರಯೋಗಿಸಿದ್ದಾರೆ. ಈ ಮೂರು ನಾಟಕಗಳು ಅಂತಹ ಚಿಂತನೆ ಮತ್ತು ಪ್ರಯೋಗದ ದಾಖಲೆಗಳು. ಮೂರೂ ನಾಟಕಗಳೂ ಒಂದಲ್ಲ ಒಂದು ಆದರ್ಶ ಎದುರಿಗಿಟ್ಟುಕೊಂಡು ಅದಕ್ಕೆ ರಂಗರೂಪ ಕೊಡಲಿಕ್ಕೆ ಹೊರಟಿವೆ -- ಆದರ್ಶ ಕುಟುಂಬ, ಆದರ್ಶ ಹಳ್ಳಿ ಮತ್ತು ಆದರ್ಶ ರಾಷ್ಟ್ರ -- ಹೀಗೆ ನಮ್ಮ ಸಮಾಜದ ವಿವಿಧ ಘಟಕಗಳನ್ನು ಆದರ್ಶದ ಕನ್ನಡಿಯಲ್ಲಿ ಕಾಣುವ ಪ್ರಯೋಗ ಈ ನಾಟಕಗಳಲ್ಲಿದೆ. ಕಲಿಕೆಯೆಂಬುದು ಆದರ್ಶಗಳ ಕನಸು ಕಾಣುವ ಮತ್ತು ಅದನ್ನು ನಾಟಕರೂಪದ ಮೂಲಕ ಮಾನಸಿಕವಾಗಿಯಾದರೂ ಸಾಕ್ಷಾತ್ಕರಿಸಿಕೊಳ್ಳುವ ಮಾಧ್ಯಮ ಎಂದು ನಂಬಿವೆ. ಶಿಕ್ಷಣ ಎಂದರೆ, ಅದು ಕೇವಲ ಕಸುಬು ಕಲಿಸುವ ಕೆಲಸವಲ್ಲ; ಅದು ಸಾಮಾಜಿಕ ಜಾಗೃತಿಯ ಉದ್ಯೋಗ ಎಂಬುದನ್ನು ನಂಬಿ, ಅದನ್ನು ಕಲೆಗಳ ಮೂಲಕವೇ ಸಾಧಿಸಬಯಸುವ ಇವತ್ತಿನ ಕಾಲದ ಪ್ರಯತ್ನಗಳಿಗೆ ಹಲವು ದಶಕಗಳ ಹಿಂದಿನ ಈ ನಾಟಕರೂಪಗಳು ಬೇರೆಬೇರೆ ರೀತಿಯ ಸ್ಫೂರ್ತಿ-ಪ್ರೇರಣೆ ನೀಡಬಲ್ಲವು.
©2024 Book Brahma Private Limited.