ಕಲ್ಯಾಣ ಶರಣರಲ್ಲಿಯೇ ಅಪರೂಪದ ಶರಣರಾದ ಮರುಳಶಂಕರದೇವರಿನ ವಿಚಾರಧಾರೆಗಳನ್ನು ಒಳಗೊಂಡ ಕೃತಿ ಲೇಖಕ ದಯಾನಂದ ಈ. ನೂಲಿ ಅವರ ‘ಮರುಳಶಂಕರದೇವರು ಅನುಭಾವಯಾತ್ರೆ’. ಕೃತಿಯ ಪೂರ್ವಾರ್ಧದ ಕಥನದಲ್ಲಿ ಮರುಳಶಂಕರದೇವರ ಚರಿತ್ರೆ, ದೇಶ ಕಾಲದ ಚಿತ್ರಣ, ದೂರದ ಅಫಘಾನಿಸ್ಥಾನದಿಂದ ಕಲ್ಯಾಣದವರೆಗಿನ ಪ್ರವಾಸ, ಭಕ್ತಿಪಂಥದ ವಿವರಗಳು ಇಲ್ಲಿ ಸೊಗಸಾಗಿ ಮೂಡಿದೆ. ಉತ್ತರಾರ್ಧದ ಕಥನದಲ್ಲಿ ಕಲ್ಯಾಣದ ದಿನಚರಿ, ಅನುಭವ ಮಂಟಪ, ಮಹಾಮನೆಯ ಪರಿಸರ, ಶರಣರ ಸಹವಾಸ, ಲಿಂಗಾಯತ ಧರ್ಮದ ಸಾಹಿತ್ಯ, ಸಂಸ್ಕೃತಿ ಕುರಿತ ಚರ್ಚೆಗಳು ವಿದ್ವತ್ಪೂರ್ಣವಾಗಿ ತೆರೆದುಕೊಳ್ಳುತ್ತವೆ. ಹಲವು ಅಸಂಗತಗಳ ಮಧ್ಯದಲ್ಲಿಯೂ ಲೋಕೋತ್ತರ ಸಾಧನೆಗೈದ ಶರಣರ ಸಾಧನೆ-ಸಿದ್ದಿಗಳು ಕೃತಿಯ ಪಾತ್ರಗಳ ಸಂಭಾಷಣೆಯಲ್ಲಿ ಸ್ಫುಟವಾಗಿ ಮೂಡಿಬಂದಿದೆ. ಕೃತಿಯ ಕೊನೆಯಲ್ಲಿ ಮರುಳಶಂಕರದೇವರು ತಮ್ಮ ಮಹಾಬಯಲ ನಿಲುವನ್ನು ಪ್ರಕಟಿಸಿರುವುದು, ಶರಣರು ಅವರಿಗೆ ನುಡಿನಮನ ಸಮರ್ಪಿಸುವುದು, ಅವರು ನಿರ್ವಾಣ ಹೊಂದುವುದು ಇವೇ ಮುಂತಾದ ವಿಷಯಗಳು ಕೃತಿಗೆ ಸಮಗ್ರತೆಯನ್ನು ತಂದುಕೊಟ್ಟಿವೆ. ಕೃತಿಯ ಮತ್ತೊಂದು ವಿಶೇಷವೆಂದರೆ, ಶರಣರ ಚರಿತ್ರೆಗಳೊಂದಿಗೆ ಲಿಂಗಾಯತ ಆಧ್ಯಾತ್ಮ ಸಾಧಕರ ರಕ್ಷಾಕವಚಗಳಂತಿರುವ ಅಷ್ಟಾವರಣಗಳನ್ನು, ಪಂಚಪ್ರಾಣಗಳಂತಿರುವ ಪಂಚಾಚಾರಗಳನ್ನು ನಿಜನಿವಾಸದಲ್ಲಿರಿಸುವ ಷಟಸ್ಥಲ ಸಾಧನಾಮಾರ್ಗವನ್ನು ಹಾಗೆಯೇ ತಾತ್ಕಾಲೀನ ಸಾಮಾಜಿಕ ವ್ಯವಸ್ಥೆಯನ್ನು ಮನದಟ್ಟು ಮಾಡಿಕೊಟ್ಟಿರುವುದು ಇಲ್ಲಿ ವಿಶೇಷವಾಗಿದೆ.
©2024 Book Brahma Private Limited.