ಮಾತು ಹಾಡಾಗಲಿ ಹಾಡು ಮಾತಾಗಲಿ

Author : ಗಣೇಶ ಅಮೀನಗಡ

Pages 312

₹ 300.00




Year of Publication: 2021
Published by: ಕವಿತಾ ಪ್ರಕಾಶನ
Address: ಮೈಸೂರು
Phone: 9880105526

Synopsys

ಲೇಖಕ ಗಣೇಶ ಅಮಿನಗಡ ಅವರ ಪ್ರಜಾವಾಣಿ, ಸುಧಾ ಪತ್ರಿಕೆಗಳಲ್ಲಿ ಪ್ರಕಟವಾದ ರಂಗಭೂಮಿ ಕುರಿತ ಲೇಖನಗಳ ಸಂಕಲನ ಈ ʼಮಾತು ಹಾಡಾಗಲಿ ಹಾಡು ಮಾತಾಗಲಿʼ. ಪ್ರಸಿದ್ಧ ರಂಗಭೂಮಿ ಕಲಾವಿದರಾದ ಏಣಗಿ ಬಾಳಪ್ಪ, ಗುಡಗೇರಿ ಬಸವರಾಜ, ಮಾಲತಿ ಸುಧೀರ್‌, ಹಾಗೂ ಪ್ರಸಿದ್ಧ ರಂಗಾಯಣಗಳಾದ ನೀನಾಸಂ, ಸಾಣೇಹಳ್ಳಿಯ ಶಿವಸಂಚಾರ, ಮೈಸೂರು, ಧಾರಾವಾಡ, ಹಾಗೂ ಶಿವಮೊಗ್ಗ ರಂಗಾಯಣ ಕುರಿತ ಲೇಖನಗಳಿವೆ. ಲೇಖಕರು ಬೆನ್ನುಡಿಯಲ್ಲಿ ʼಈಚೆಗೆ ಬರುವ ನಟ-ನಟಿಯರಲ್ಲಿ ರಂಗಭೂಮಿ ಪರಂಪರೆ ಯಾಕೆ ಬೆಳೆಯುತ್ತಿಲ್ಲ ಎನ್ನುವ ಹುಡುಕಾಟ ಈ ಸಂಕಲನದಲ್ಲಿದೆʼ ಎಂದು ಕೃತಿ ಕುರಿತು ಲೇಖಕರು ವಿವರಿಸಿದ್ದಾರೆ.

About the Author

ಗಣೇಶ ಅಮೀನಗಡ

ಊರು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಅಮೀನಗಡ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ., ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 'ಕನ್ನಡ ಬಂಡಾಯ ಕಾವ್ಯದಲ್ಲಿ ಪ್ರತಿಮಾ ಸಂವಿಧಾನ ಕುರಿತು ಪಿಎಚ್.ಡಿ. ಮೂರು ವರ್ಷ ಸಂಯುಕ್ತ ಕರ್ನಾಟಕದಲ್ಲಿ ಪತ್ರಕರ್ತರಾಗಿ ಸೇವೆ, ಈಗ ಮೈಸೂರಲ್ಲಿ ಪ್ರಜಾವಾಣಿಯ ಮುಖ್ಯ ವರದಿಗಾರ. ರಂಗಭೂಮಿ ಕುರಿತ ಲೇಖನಗಳ ಸಂಕಲನ 'ಪ್ರಯೋಗ ಪ್ರಸಂಗ' ಕೃತಿ (2004), ವಿಜಾಪುರದ ಯುವ ಲೇಖಕರ ವೇದಿಕೆಯ ಪ್ರಶಸ್ತಿ, ಸೇಡಂನ ಅಮ್ಮ ಪ್ರಶಸ್ತಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿಗಳಿಂದ ಪುರಸ್ಕೃತಗೊಂಡಿದೆ. ಏಣಗಿ ಬಾಳಪ್ಪ ಅವರ ರಂಗಾನುಭವ ಕಥನ 'ಬಣ್ಣದ ಬದುಕಿನ ಚಿನ್ನದ ದಿನಗಳು' ...

READ MORE

Reviews

'ಮಾತು ಹಾಡಾಗಲಿ ಹಾಡು ಮಾತಾಗಲಿ' ಕೃತಿ ಕುರಿತು ಜಗದೀಶ ಕೊಪ್ಪ

...................................

ಮಾತು ಹಾಡಾಗಲಿ ಹಾಡು ಹಾಡಾಗಲಿ ಕೃತಿಯ ವಿಮರ್ಶೆ- ಹೊಸ ಮನುಷ್ಯ

 ಪತ್ರಕರ್ತ ಗಣೇಶ್ ಅಮೀನಗಡ ಅವರು ರಂಗಭೂಮಿ ಕುರಿತಾಗಿ 'ಪ್ರಜಾವಾಣಿ' 'ಸುಧಾ' ಪತ್ರಿಕೆಗಳಲ್ಲಿ ಬರೆದ ಲೇಖನಗಳ ಸಂಗ್ರಹವಿದು. 'ರಂಗಭೂಮಿಯೆ ಶಿವಾನುಭವ ಮಂಟಪವಾಗಿ', 'ಬದಲಾದ ರಂಗ ಕೈದಿಗಳು', 'ಪಂಜರದ ಗಿಳಿಗಳ ಹಾಡು ಪಾಡು', 'ದಣಿವರಿಯದ ರಂಗ ಕಾಯಕಗಳು', 'ನಾಟಕ ನೋಟ' ಎಂಬ ಐದು ವಿಭಾಗಗಳಲ್ಲಿ ಇಲ್ಲಿನ ಲೇಖನಗಳು ವಿಂಗಡಣೆಯಾಗಿವೆ. ಹಾನಗಲ್‌ನ ಕುಮಾರ ಶ್ರೀಗಳು ವೃತ್ತಿ ರಂಗಭೂಮಿಯನ್ನುಪೋಷಿಸಿ ಬೆಳೆಸಿದ ವಿವರಗಳೊಂದಿಗೆ ಆರಂಭವಾಗುವ ರಂಗಭೂಮಿ ಕುರಿತ ಕೃತಿ ನಂತರ ರಂಗ ಸಂಗೀತ, ರಂಗಗೀತೆಗಳತ್ತ ಹೊರಳುತ್ತದೆ. ಬಿ.ವಿ.ಕಾರಂತರು ದೇಸಿ ಮಟ್ಟುಗಳನ್ನು ಬಳಸಿ ವೃತ್ತಿರಂಗಭೂಮಿಯ ಸಂಗೀತ ಪರಂಪರೆಯನ್ನು ಆಧುನಿಕ ರಂಗಭೂಮಿಗೆ ವರ್ಗಾಯಿಸಿದ ಪರಿಯನ್ನು ಇಲ್ಲಿ ಪರಿಚಯಿಸಲಾಗಿದೆ. ಹಾಗೇ, ಪೌರಾಣಿಕ ನಾಟಕಗಳಲ್ಲಿನ ಭಾಷಾ ಸಮೃದ್ಧಿ, ಹೋರಾಟದ ಹಾಡುಗಳು ನಾಟಕಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಯಾಗಿ ರಂಗಭೂಮಿ ಚಳವಳಿಗಳ ಭಾಗವಾದ ಕುರಿತ ಸ್ಕೂಲವಾದ ವಿವರ ಇಲ್ಲಿ ದಾಖಲಾಗಿದೆ. ನಾಡಿನ ಉದ್ದಗಲಕ್ಕೂ ಹರಡಿರುವ ರಂಗಗೀತೆಗಳನ್ನು ಹಾಡುವ ಕಲಾವಿದರ ಹೆಸರುಗಳೂ ಉಲ್ಲೇಖಗೊಂಡಿವೆ.

 ವೃತ್ತಿ ರಂಗಭೂಮಿಯಲ್ಲಿ ಭಾರೀ ಯಶಸ್ಸು ಕಂಡ ನಾಟಕಗಳು, ನಾಟಕದ ಜಾತ್ರೆಯಂತಿರುವ ಬನಶಂಕರಿ ಜಾತ್ರೆ ನಾಟಕಗಳಲ್ಲಿ ಪ್ರವೇಶಗೊಂಡ ಐಟಂ ಸಾಂಗ್, ಬದಲಾದ ರಂಗ ವಿಮರ್ಶೆಯ ಧೋರಣೆ, ಮೈಸೂರಿನ ರಂಗಾಯಣದಲ್ಲಿ “ಮಲೆಗಳಲ್ಲಿ ಮದುಮಗಳು' ನಾಟಕದ ಟಿಕೆಟ್ ಕಾಳಸಂತೆಯಲ್ಲಿ ಮಾರಾಟವಾಗಿದ್ದು....ಹೀಗೆ ಹತ್ತು ಹಲವು ವಿವರಗಳನ್ನು ಕಟ್ಟಿಕೊಡಲಾಗಿದೆ. ಕೆಲವು ಕಲಾವಿದರ ಸಂದರ್ಶನವೂ ಅಡಕವಾಗಿದೆ. 'ಬ್ಯೂಟಿ ಪಾರ್ಲ‌ರ್ ನಲ್ಲಿ ನಟಿ, ಜಿಮ್‌ನಲ್ಲಿ ನಟ ಹುಟ್ಟುವುದಿಲ್ಲ' ಎಂದು ಸಂದರ್ಶನದಲ್ಲಿ ನಟ ಮಂಡ್ಯ ರಮೇಶ್ ಹೇಳಿರುವ ಮಾತು ಯುವ ತಲೆಮಾರಿನ ನಟ ನಟಿಯರಿಗೆ ನಾಟುವಂತಿದೆ. ಇದೇ ಭಾಗದಲ್ಲಿ ಮಕ್ಕಳಿಗೆ ರಂಗಭೂಮಿ ಶಿಕ್ಷಣದ ಮೂಲಕ ವಿಶ್ವಾಸ ಮೂಡಿಸುವ ಮಾದರಿ ಕುರಿತು ಇರುವ ಬರಹ ಅರ್ಥಪೂರ್ಣವಾಗಿದೆ.

ಎರಡನೇ ಭಾಗದಲ್ಲಿ ಮೈಸೂರು ರಂಗಾಯಣದ ಹುಲಗಪ್ಪ ಕಟ್ಟಿಮನಿ ರಾಜ್ಯದ ವಿವಿಧ ಜೈಲುಗಳಲ್ಲಿರುವ ಖೈದಿಗಳಿಗೆ ನಾಟಕ ಮಾಡಿಸಿ ಅವರ ಬದುಕಿನಲ್ಲಿ ಬದಲಾವಣೆ ಮೂಡಿಸಿದ ಚಿತ್ರಣವಿದೆ. ಚಿಂದಿ ಆಯುವ ಮಕ್ಕಳಿಂದಲೆ ನಾಟಕ ಮಾಡಿಸಿದ ಜಾನ್ ದೇವರಾಜ್‌ ಕುರಿತ ಲೇಖನ ಕೂಡ ಗಮನ ಸೆಳೆಯುವಂತಿದೆ. “ಪಂಜರದ ಗಿಳಿಗಳ ಹಾಡು ಪಾಡು' ವಿಭಾಗದಲ್ಲಿ ರಂಗಭೂಮಿಯಲ್ಲಿ ನಟಿಯರು ಅನುಭವಿಸಿದ ಸಂಕಷಗಳ ಚಿತ್ರಣವಿದ್ದು ಅವು ಮನಕಲುಕುವಂತಿವೆ. 'ದಣಿವರಿಯದ ರಂಗ ಕಾಯಗಳು' ವಿಭಾಗದಲ್ಲಿ ಏಣಗಿ ಬಾಳಪ್ಪ ಅವರು ತಮ್ಮ 95 ನೇ ವಯಸ್ಸಿನಲ್ಲೂ, ಅವರ ಪತ್ನಿ ಲಕ್ಷ್ಮೀಬಾಯಿ 79 ರ ಪ್ರಾಯದಲ್ಲೂ ಬಣ್ಣ ಹಚ್ಚಿ ರಂಗದ ಮೇಲೆ ಬಂದಿದ್ದರು ಎಂಬ ಲೇಖನ ಓದಿದಾಗ ಆ ತಲೆಮಾರಿನ ಕಲಾವಿದರಿಗಿದ್ದ ಬದ್ದತೆಯ ದರ್ಶನವಾಗುತ್ತದೆ. ಇದರ ಜೊತೆಗೇ ವೃತ್ತಿ ರಂಗಭೂಮಿ ಜೊತೆಗೆ ಆಧುನಿಕ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ರಾಜ್ಯದ ಹಲವು ಕಲಾವಿದರ, ತಂತ್ರಜ್ಞರ ಸಕಲ ವಿವವರಗಳು ಇದೇ ಭಾಗದಲ್ಲಿವೆ.

ಕೃತಿಯ ಕೊನೆಯ ಭಾಗವಾದ 'ನಾಟಕ ನೋಟ' ವಿಭಾಗದಲ್ಲಿ ಲೇಖಕರು ತಾವು ನೋಡಿದ ನಾಟಕಗಳ ಕುರಿತು ಬರೆದಿದ್ದಾರೆ. ಇವುಗಳಲ್ಲಿ ಕೆಲವು ವಿಮರ್ಶೆಯ ಧಾಟಿಯಲ್ಲಿದ್ದರೆ ಒಂದಿಷ್ಟು ಲೇಖನಗಳು ಪರಿಚಯಾತ್ಮಕ ಸ್ವರೂಪದಲ್ಲಿವೆ. ಅಕಾಡೆಮಿಕ್ ಅಂಶಗಳತ್ತ ಲೇಖಕರು ಹೆಚ್ಚು ಗಮನಹರಿಸಿಲ್ಲ.

ಇಲ್ಲಿನ ಎಲ್ಲಾ ಲೇಖನಗಳು ಪತ್ರಿಕಾ ಬರಹಗಳಾಗಿದ್ದು ಪದಗಳ ಮಿತಿ ಇರುವುದರಿಂದ ಅನೇಕ ಲೇಖನಗಳು ಅಪೂರ್ಣ ಅನಿಸುತ್ತವೆ. ವಿವರಗಳ ವಿಷಯಕ್ಕೆ ಬಂದರೆ ಆಧುನಿಕ ರಂಗಭೂಮಿಗಿಂತ ವೃತ್ತಿರಂಗಭೂಮಿಯ ವಿಷಯಗಳ ಪ್ರಾಮುಖ್ಯತೆ ಪಡೆದಿವೆ. ರಾಜ್ಯದಲ್ಲಿ ತಮ್ಮದೆ ಆದ ಮಿತಿಯಲ್ಲಿ ರಂಗಚಟುವಟಿಕೆಗಳ ಮೂಲಕ ಈ ಕಲೆಯನ್ನು ಜೀವಂತವಾಗಿಟ್ಟಿರುವ ಹಲವು ಹವ್ಯಾಸಿ ತಂಡಗಳ ಮಾಹಿತಿ ಇಲ್ಲದಿರುವುದು ಕೃತಿಯ ಕೊರತೆಯಾಗಿ ಕಾಣುತ್ತದೆ. ಆದರೂ ನಾಲೈದು ದಶಕಗಳ ಕಾಲ ರಂಗಭೂಮಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡರೂ ಬೆಳಕಿಗೆ ಬಾರದ ಕಲಾವಿದರು ನಮ್ಮ ನಡುವೆ ಇದ್ದಾರೆ. ಪರಿಚಿತರ ಜೊತೆಗೆ ಅಂತವರೂ ಕೃತಿಯಲ್ಲಿ ಸೇರಿರುವುದು ಸಮಾಧಾನದ ಸಂಗತಿ. ಕರ್ನಾಟಕದ ರಂಗಭೂಮಿಯ ಕುರಿತು ಸಮಗ್ರ ಅಧ್ಯಯನ ನಡೆಸುವವರಿಗೆ ಈ ಕೃತಿ ಆಕರವಾಗಬಹುದು.

(ಕೃಪೆ: ಪುಸ್ತಕವಾಲೋಕನ, ಬರಹ: ಎಂ. ರಾಘವೇಂದ್ರ)

Related Books