`ಬಿಡಾರ’ ಚಂದ್ರಕಾಂತ ಪೋಕಳೆ ಅವರ ಅನುವಾದಿತ ಆತ್ಮಕಥನವಾಗಿದೆ. ದಲಿತರ ಆತ್ಮಕಥೆಗಳಲ್ಲಿ ದಲಿತರ ಶೋಷಣೆ, ಸವರ್ಣೀಯರ ದೌರ್ಜನ್ಯ, ಅವರು ಅನುಭವಿಸಿದ ಅಪಾರ ವೇದನೆ, ತೊಳಲಾಟ, ಪಟ್ಟ ಸಂಕಟ, ನಡೆಸಿದ ಚಳವಳಿ, ಹೀಗೆ ಒಟ್ಟಾರೆಯಾಗಿ ಗತಕಾಲದ ಚರಿತ್ರೆಯ ದುರಂತ ಚಿತ್ರಣ ವ್ಯಕ್ತವಾಯಿತು. ಇದೊಂದು ರೀತಿಯ ಸಾಮಾಜಿಕ, ಸಾಂಸ್ಕೃತಿಕ ದಸ್ತಾವೇಜು ಎನಿಸಿತು. ಅಂಥ ಹತ್ತಾರು ಮರಾಠಿ ದಲಿತ ಆತ್ಮಕಥೆಗಳು ಕನ್ನಡಕ್ಕೆ ಭಾಷಾಂತರಗೊಂಡವು. ಅಶೋಕ ಪವಾರ ಅವರ ‘ಬಿಡಾರ’ ಅಂಥದೊಂದು ಮಹತ್ವದ ದಲಿತ ಆತ್ಮಕಥೆ. ಅಲೆಮಾರಿ ಜೀವನ ಸಾಗಿಸುವ ಇಡೀ ಸಮುದಾಯದ ಕಥೆಯು ಹೃದಯ ಹಿಂಡುವಷ್ಟು ಪ್ರಖರವಾಗಿ ಮಾಡಿ ಬಂದಿದೆ. ಇದು ಕಲ್ಲು ಕಡೆದು, ಮನೆ, ಕೆರೆ, ಒಡ್ಡುಗಳನ್ನು ಕಟ್ಟುವ ಸಮುದಾಯದವರ ಕಥನ. ಇವರಿಗೆ ಯಾವುದೇ ಶಾಶ್ವತವಾದ ಊರಿಲ್ಲ, ಮನೆಯಿಲ್ಲ, ಆಸ್ತಿಪಾಸ್ತಿಯಿಲ್ಲ, ಹೊಲಗದ್ದೆಯಿಲ್ಲ. ಇಂದು ಒಂದು ಊರಾದರೆ, ನಾಳೆ ಮತ್ತೊಂದೂರು. ಊರೂರು ತಿರುಗಾಡಿ, ಕಲ್ಲು ಒಡೆದು ಹೊಟ್ಟೆ ಹೊರೆಯುವುದೇ ಇವರ ಜೀವನ ಕ್ರಮ. ಈ ಜೀವನ ಯಾತ್ರೆಯಲ್ಲಿ ಅನುಭವಿಸಿದ ನೋವು, ಹಸಿವು, ಸಂಕಟ, ಪೋಲೀಸ್ ದೌರ್ಜನ್ಯ - ಮುಂತಾದವುಗಳ ಚಿತ್ರಣ ಕರುಳು ಹಿಂಡುವಷ್ಟು ಸಶಕ್ತವಾಗಿ ಮೂಡಿ ಬಂದಿದೆ.
©2024 Book Brahma Private Limited.